1500ಕ್ಕೂ ಅಧಿಕ ಶವ ಸಂಸ್ಕಾರ ಸೇವೆ ನಡೆಸಿದ ಗಣೇಶ್ ಕುಲಾಲ್‌ಗೆ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ

| Published : Feb 10 2025, 01:46 AM IST

1500ಕ್ಕೂ ಅಧಿಕ ಶವ ಸಂಸ್ಕಾರ ಸೇವೆ ನಡೆಸಿದ ಗಣೇಶ್ ಕುಲಾಲ್‌ಗೆ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಪಾಲೆಮಾರ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರಿಗೆ 2024ನೇ ಸಾಲಿನ ವಾರ್ಷಿಕ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ನಿಸ್ವಾರ್ಥ ಮನೋಭಾವದಿಂದ ಸಮಾಜದ ಒಳಿತಿಗಾಗಿ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯ ಎಂದು ಮಾಜಿ ಸಚಿವ ಕೃಷ್ಣ. ಜೆ.ಪಾಲೆಮಾರ್ ಹೇಳಿದ್ದಾರೆ.ನಗರದ ಪಾಲೆಮಾರ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಕಾರ್ಪೊರೇಟರ್ ಗಣೇಶ್ ಕುಲಾಲ್ ಅವರಿಗೆ 2024ನೇ ಸಾಲಿನ ವಾರ್ಷಿಕ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಗಣೇಶ್ ಕುಲಾಲ್ ಅವರ ಸಮಾಜ ಸೇವೆ ಎಲ್ಲರಿಗೂ ಮಾದರಿ. ಇಂಥವರು ಅಪರೂಪ. ಪತ್ರಕರ್ತರಿಂದಾಗಿ ಹರೇಕಳ ಹಾಜಬ್ಬ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಗಣೇಶ್ ಕುಲಾಲ್ ಅವರ ಸೇವೆ ಕೂಡ ಉನ್ನತ ಮಟ್ಟದಲ್ಲಿ ಗುರುತಿಸಲ್ಪಡಲಿ ಎಂದು ಪಾಲೆಮಾರ್ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮೇಯರ್ ದಿವಾಕರ ಕದ್ರಿ ಮಾತನಾಡಿ, ಜನಸಾಮಾನ್ಯರಿಗೆ ಸತ್ಯ ದರ್ಶನ ಮಾಡುವಲ್ಲಿ ಪತ್ರಕರ್ತರು ಹಿಂಜರಿಯಬಾರದು. ಸಮಾಜದ ಅಭಿವೃದ್ಧಿಯಲ್ಲಿ ಪತ್ರಕರ್ತರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.1500ಕ್ಕೂ ಅಧಿಕ ಶವ ಸಂಸ್ಕಾರ ಸೇವೆ ನಡೆಸಿರುವ ಗಣೇಶ್ ಕುಲಾಲ್ ಅವರಿಗೆ ಪ್ರೆಸ್‌ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರೆಸ್‌ಕ್ಲಬ್ ಸ್ಥಾಪಕ ಅಧ್ಯಕ್ಷ ಕೆ.ಆನಂದ ಶೆಟ್ಟಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಮೇಯರ್ ಮನೋಜ್ ಕುಮಾರ್ ಕೋಡಿಕಲ್, ಉಪ ಮೇಯರ್ ಭಾನುಮತಿ, ಮಾಜಿ ಮೇಯರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಅನ್ನು ಮಂಗಳೂರು, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ ಇದ್ದರು.

ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾದ ಆತ್ಮಭೂಷಣ್ ಭಟ್, ಆರ್.ಸಿ.ಭಟ್, ಹರೀಶ್ ಮೋಟುಕಾನ ಅವರು ಸನ್ಮಾನಿತರ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪರಿಚಯ ನೀಡಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಲೋಕೇಶ್ ರೈ ಮತ್ತು ನಿಖಿಲ್ ನಿರೂಪಿಸಿದರು.

...............ಸಾಧಕರಿಗೆ ಸನ್ಮಾನಹಿರಿಯ ಪತ್ರಕರ್ತರಾದ ಮಹಮ್ಮದ್ ಆರಿಫ್ ಪಡುಬಿದ್ರಿ, ಭಾಸ್ಕರ ರೈ ಕಟ್ಟ, ಜಿತೇಂದ್ರ ಕುಂದೇಶ್ವರ, ಸತೀಶ್ ಇರಾ, ರಘುರಾಮ‌ ನಾಯಕ್ ಅವರಿಗೆ ಪ್ರೆಸ್‌ ಕ್ಲಬ್ ಗೌರವ ಪ್ರಶಸ್ತಿ ನೀಡಲಾಯಿತು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಯು.ಕೆ. ಕುಮಾರನಾಥ್, ಅನ್ನು ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ, ವಿಜಯ ಕೋಟ್ಯಾನ್ ಮತ್ತು ಸಂಧ್ಯಾ ಹೆಗಡೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಐ.ಬಿ. ಸಂದೀಪ್ ಕುಮಾರ್, ಸುಖಪಾಲ್ ಪೊಳಲಿ ಮತ್ತು ಪುಷ್ಪರಾಜ್ ಬಿ.ಎನ್. ಅವರನ್ನು ಸನ್ಮಾನಿಸಲಾಯಿತು. 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.