ಸಾರಾಂಶ
Press conference at the city police headquarters
- 8 ಕುರಿ ಮರಿ, ನಗದು ಸೇರಿ 2.76 ಲಕ್ಷ ರು. ಮೊತ್ತದ ವಸ್ತುಗಳ ಜಪ್ತಿ । ಇನ್ನೊಬ್ಬ ಆರೋಪಿ ಬಲೆ
ಕನ್ನಡಪ್ರಭ ವಾರ್ತೆ, ಕಲಬುರಗಿಜಿಲ್ಲೆಯ ಹಳೆ ಶಹಾಬಾದ್ ಮತ್ತು ಮಾಲಗತ್ತಿ ಗ್ರಾಮಗಳಲ್ಲಿ ನಡೆದ ಕುರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬಾದ ನಗರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ತಾಲ್ಲೂಕಿನ ಕುರುಕಂಬ ತಾಂಡಾದ ಶಂಕರ ತಂದೆ ಮಲ್ಲು ಅಲಿಯಾಸ್ ಖೇಮ್ಯಾ ರಾಠೋಡ್, ಹೊರಂಚಿ ತಾಂಡಾದ ದೇವಪ್ಪ ತಂದೆ ಸಾಯಬಣ್ಣ ಗಾಲೆಪ್ಪ ಎಂಬುವವರನ್ನು ಬಂಧಿಸಿ 40 ಸಾವಿರ ರೂ.ಮೌಲ್ಯದ 8 ಕುರಿ ಮರಿ, 1.55 ಲಕ್ಷ ರೂ.ನಗದು ಸೇರಿ 1.95 ಲಕ್ಷ ರೂ.ಮೌಲ್ಯದ ವಸ್ತುವನ್ನು, ಇನ್ನೊಂದು ಪ್ರಕರಣದಲ್ಲಿ 81 ಸಾವಿರ ರೂ.ನಗದು, ಕುರಿ ಕಳ್ಳತನಕ್ಕೆ ಉಪಯೋಗಿಸಿದ ಟಾಟಾ ಗೂಡ್ಸ್ ವಾಹನ ಸೇರಿ 2.76 ಲಕ್ಷ ರೂ.ಮೊತ್ತದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ತಿಳಿಸಿದರು.ಇನ್ನೊಬ್ಬ ಆರೋಪಿ ಯಾದಗಿರಿ ತಾಲ್ಲೂಕಿನ ಮುಂಡರಗಿ ಸಣ್ಣ ತಾಂಡಾದ ದಶರಥ ತಂದೆ ಚನ್ನಪ್ಪ ಅಲಿಯಾಸ್ ಚಿನ್ಯಾ ಅಲಿಯಾಸ್ ಚಿನ್ನಾ ಚವ್ಹಾಣ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಕಾರ್ಯ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.ಹಳೆ ಶಹಾಬಾದನ ಶಿವರಾಯ ಹಾಜಪ್ಪ ಹುಬ್ಬಳ್ಳಿ ಅವರ ಮನೆ ಮುಂದಿನ ಕುರಿ ದೊಡ್ಡಿಯಲ್ಲಿ ಕಟ್ಟಿದ್ದ 30 ಕುರಿ ಮತ್ತು 10 ಕುರಿ ಮರಿ ಮತ್ತು ಮಾಲಗತ್ತಿ ಗ್ರಾಮದ ನಾಗರಾಜ ಶಾಂತಪ್ಪ ಸಾಲೊಳ್ಳಿ ಅವರ ಹೊಲದಲ್ಲಿನ ಮನೆ ಮುಂದೆ ಕಟ್ಟಿದ್ದ 12 ಕುರಿ ಮತ್ತು 6 ಹೋತಗಳು ಕಳುವಾದ ಬಗ್ಗೆ ಶಹಾಬಾದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಎರಡೂ ಪ್ರಕರಣದಲ್ಲಿನ ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಮಾರ್ಗದರ್ಶನದಲ್ಲಿ ಶಹಾಬಾದ ಪಿಐ ನಟರಾಜ ಲಾಡೆ, ಪಿಎಸ್‍ಐ ಶಾಮರಾಯ, ಎಎಸ್‍ಐ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ದೊಡ್ಡಪ್ಪ, ನಾಗೇಂದ್ರ, ಬಸವರಾಜ, ಸಂತೋಷ, ಹುಸೇನ ಪಾಷ ಅವರನ್ನು ಒಳಗೊಂಡ ಎರಡು ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ಕುರಿ ಕಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.ಕುರಿ ಕಳ್ಳರು ಈ ಮೊದಲು ಯಾದಗಿರಿ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಕುರಿ ಕಳ್ಳತನ ಮಾಡಿದ ಬಗ್ಗೆ ಪ್ರಕರಣಗಳು ದಾಖಲಾಗಿವೆ ಎಂದು ಎಸ್‍ಪಿ ತಿಳಿಸಿದರು.ಕುರಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು.ಫೋಟೋ- ಶೀಪ್ 1 ಮತ್ತು ಶೀಪ್ 2