ಉಪ್ಪಾರರ ಕುಲಶಾಸ್ತ್ರ ಅಧ್ಯಯನಕ್ಕೆ ಒತ್ತಡ

| Published : Oct 27 2025, 02:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪ್ರವರ್ಗ 1ರಲ್ಲಿರುವ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಗೆ ಪೂರಕವಾಗಿ ಕುಲಶಾಸ್ತ್ರ ಅಧ್ಯಯನ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರವರ್ಗ 1ರಲ್ಲಿರುವ ಉಪ್ಪಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಗೆ ಪೂರಕವಾಗಿ ಕುಲಶಾಸ್ತ್ರ ಅಧ್ಯಯನ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ, ಜಿಲ್ಲಾ ಉಪ್ಪಾರ ನೌಕರರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರು ಹಾಗೂ ನೂತನ ನೌಕರರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಎಲ್ಲ ಸಮಾಜಗಳಲ್ಲಿ ಇರುವಂತೆ ಆರ್ಥಿಕ ಬಡವರಿದ್ದಾರೆ. ಅಂಥವರಿಗೆ ಸಾಮಾಜಿಕ ನ್ಯಾಯದ ಲಾಭ ಸಿಗಬೇಕಿದೆ. ಮೀಸಲಾತಿಗಾಗಿ ಕುಲ ಶಾಸ್ತ್ರ ಅಧ್ಯಯನ ನಡೆಸುವ ಕುರಿತು ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಸೇರಿ ಚರ್ಚೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ನಗರದಲ್ಲಿ ಭಗೀರಥ ಮಹಾರಾಜರ ಮೂರ್ತಿ ಅನಾವರಣದ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರೊಂದಿಗೆ ಸೇರಿ ಪ್ರಾಮಾಣಿಕ ಬದ್ಧತೆ ತೋರುತ್ತೇನೆ. ಭೂಮಿಗೆ ಗಂಗೆಯನ್ನು ಕರೆತಂದ ಭಗೀರಥ ಮಹರ್ಷಿಗಳ ಉಪ್ಪಾರ ಸಮುದಾಯ ಉಪ್ಪು, ಇದ್ದಲಿಯಂಥ ವಸ್ತುಗಳನ್ನು ಮಾರಾಟ ಮಾಡಿ ಪರಿಶ್ರಮದ ಜೀವನ ನಡೆಸುತ್ತ ಬಂದಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಉಪ್ಪಿನ ಸತ್ಯಾಗ್ರಹದಲ್ಲಿ ತನ್ನ ಯೋಗದಾನ ನೀಡಿದೆ ಎಂದು ಬಣ್ಣಿಸಿದರು.

ಉಪ್ಪಾರ ಸಮುದಾಯದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಶ್ರೀಗಳು ನಾಲ್ಕಾರು ಕಾಲೇಜುಗಳನ್ನು ಕಟ್ಟಿ ಬೆಳೆಸುವ ಮೂಲಕ ಸಮಾಜಕ್ಕೆ ಮಹದುಪಕಾರ ಮಾಡುತ್ತಿದ್ದಾರೆ. ಶೈಕ್ಷಣಿಕ ಕ್ರಾಂತಿಯ ಪರಿಣಾಮ ಉಪ್ಪಾರ ಸಮುದಾಯದ ಬಡತನದಲ್ಲಿ ಅರಳಿದ ಪ್ರತಿಭಾವಂತರು ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದೆ ಎಂದರು.

ಉಪ್ಪಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಕ್ಕಪ್ಪ ಯಡವೇ ಮಾತನಾಡಿ, ಮೂರು ದಶಕಗಳ ಹಿಂದೆ ನಮ್ಮ ಸಮುದಾಯ ಸಂಘಟನೆಗಾಗಿ ಸಾಕಷ್ಟು ಬೆಂಬಲವಾಗಿ ನಿಂತಿದ್ದವರು ಈಗ ಸಚಿವರಾಗಿರುವ ಶಿವಾನಂದ ಪಾಟೀಲ ಅವರು ನನ್ನ ರಾಜಕೀಯ ಪ್ರಾತಿನಿಧ್ಯದ ವಿಷಯದಲ್ಲಿ ಅವರ ಪ್ರೋತ್ಸಾಹ, ಉಪಕಾರ ಸದಾ ಸ್ಮರಣೀಯ ಎಂದು ಸ್ಮರಿಸಿದರು.

ಚಿತ್ರದುರ್ಗದ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಶ್ರೀಗಳು, ಚಿಕ್ಕಲಕಿ ಕ್ರಾಸ್ ಸಾಧನ ತಪೋವನದ ಶಿವಾನಂದ ಶ್ರೀಗಳು, ಪಂಢರಪುರದ ಶಾಂತಮ್ಮ ಮಾತಾಜಿ, ಶಾಸಕರಾದ ಪುಟ್ಟರಂಗಶೆಟ್ಟಿ, ವಿಠ್ಠಲ ಕಟಕಧೋಂಡ, ಬಸನಗೌಡ ಪಾಟೀಲ ಯತ್ನಾಳ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಉಪ್ಪಾರ ನೌಕರರ ಸಂಘದ ಜಿಲ್ಲಾಧ್ಯಕ್ಷ ಪುಂಡಲೀಕ ಉಪ್ಪಾರ, ತಹಸೀಲ್ದಾರ್‌ ಸುರೇಶ‌ ಮುಂಜೆ, ಡಾ.ಸುರೇಶ ಕಾಗಲಕರ ಉಪಸ್ಥಿತರಿದ್ದರು.