ಕೊಪ್ಪಳದ ಜನರು ಕಾರ್ಖಾನೆಗಳಿಂದ ತೊಂದರೆಯಲ್ಲಿ ಇದ್ದಾರೆ. ಕ್ಯಾನ್ಸರ್, ಚರ್ಮರೋಗ ಸೇರಿದಂತೆ ಹಲವು ರೋಗಕ್ಕೆ ತುತ್ತಾಗುತ್ತಿದ್ದಾರೆ. ರೈತರ ಬೆಳೆ ಕಾರ್ಖಾನೆ ಧೂಳಿನಿಂದ ಹಾಳಾಗುತ್ತಿದೆ

ಕೊಪ್ಪಳ: ಕಾರ್ಖಾನೆಗಳು ಸ್ಥಾಪನೆ ಆಗದಂತೆ ನಾವು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಭರವಸೆ ನೀಡಿದರು.

ಇಲ್ಲಿಯ ನಗರಸಭೆ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜರುಗಿದ ಕೊಪ್ಪಳ, ಭಾಗ್ಯನಗರದ ಪ್ರತಿಭಟನಾ ಬಂದ್ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಅವರು, ಇದು ಪಕ್ಷಾತೀತ ಹೋರಾಟವಾಗಿದೆ. ನಮಗೆ ಆರೋಗ್ಯ ಮುಖ್ಯ, ಶ್ರೀಗಳು ಸಹಿತ ನಮಗೆ ಆದೇಶ ಮಾಡಿದ್ದರು. ನಾವು ಮುಖ್ಯಮಂತ್ರಿಗಳಿಗೆ ಪಕ್ಷಾತೀತ ಮನವಿ ಮಾಡಿದ್ದೇವೆ. ಬಲ್ಡೋಟಾ ರದ್ಧತಿ ಮಾಡಲು ಒತ್ತಾಯ ಮಾಡಿದ್ದೇವು. ಸಿಎಂ ತಾತ್ಕಾಲಿಕ ಮೌಖಿಕವಾಗಿ ಹೇಳಿದ್ದಾರೆ. ನಾವು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಇಲ್ಲಿ ಸರ್ವೆ ಮಾಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದರು.

ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಕೊಪ್ಪಳದ ಜನರು ಕಾರ್ಖಾನೆಗಳಿಂದ ತೊಂದರೆಯಲ್ಲಿ ಇದ್ದಾರೆ. ಕ್ಯಾನ್ಸರ್, ಚರ್ಮರೋಗ ಸೇರಿದಂತೆ ಹಲವು ರೋಗಕ್ಕೆ ತುತ್ತಾಗುತ್ತಿದ್ದಾರೆ. ರೈತರ ಬೆಳೆ ಕಾರ್ಖಾನೆ ಧೂಳಿನಿಂದ ಹಾಳಾಗುತ್ತಿದೆ. ಅದನ್ನು ತಿನ್ನುವ ಜಾನುವಾರು ಸಹ ಸಾಯುತ್ತಿವೆ. ತುಂಗಭದ್ರಾ ನದಿ ಕಾರ್ಖಾನೆಗಳಿಂದ ಮಲೀನವಾಗಿದೆ. ಬಸಾಪುರ ಕೆರೆ ಸರ್ಕಾರ ಕಾರ್ಖಾನೆಗೆ ಗುತ್ತಿಗೆ ಕೊಟ್ಟಿದೆ. ನಮ್ಮ ತಾಯಿ ಗಂಗಮ್ಮನ್ನ ಗುತ್ತಿಗೆ ಕೊಡುತ್ತೇವೆಯಾ ? ಈ ಬಂಡವಾಳ ಶಾಹಿಗಳ ದರ್ಪ ನೋಡಿಕೊಂಡು ಸುಮ್ನೆ ಇರಬೇಕು. ಸರ್ಕಾರ ಎಲ್ಲ ಗ್ಯಾರಂಟಿಗಿಂತ ಜೀವದ ಗ್ಯಾರಂಟಿ ಕೊಡಲಿ, ಸರ್ಕಾರದವರು ಹೃದಯವಂತರಾಗಲಿ, ಹೃದಯ ಹೀನರಾಗಬೇಡಿ ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ಜನರಿಗೆ ಉದ್ಯೋಗ ಬೇಕು. ಆದರೆ ಜೀವ ತೆಗೆಯುವಂತ ಉದ್ಯೋಗ ಬೇಡ. ಸಂಡೂರು ನರಕಯಾತನೆ ನೋಡಿದರೆ ಜೀವ ನೋವಾಗಲಿದೆ. ಆಡಳಿತ ನಡೆಸುವವರಿಗೆ ಸೂಕ್ಷ್ಮತೆ, ಸಂವೇದನೆ, ಮಾನವೀಯತೆ ಇರಬೇಕು. ಈಗ ಕೊಪ್ಪಳದಲ್ಲಿ ಮತ್ತೆ ಎರಡನೇ ಬಂದ್ ಆಗಿದೆ. ರಾಜ್ಯದಲ್ಲಿ ದೇವೇನಹಳ್ಳಿ ಹೋರಾಟ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಹೋರಾಟಕ್ಕೆ ಒತ್ತು ನೀಡಿದರು. ನಾವು ಕೈಗಾರಿಕಾ ವಿರೋಧಿ ಅಲ್ಲ. ಜನರ ಜೀವ ತೊರೆಯುವ ಕೈಗಾರಿಕೆಗಳು ಬೇಡ ನಮಗೆ, ಈ ಹೋರಾಟಕ್ಕೆ ಜೈಲಿಗೆ ಹೋಗಲು ನಾವು ಸಿದ್ದರಿದ್ದೇವೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳದ ಒಂದುವರೆ ಲಕ್ಷ ಜನ ಬಾಧಿತರಾಗಿದ್ದಾರೆ. ಎಲ್ಲರೂ ಸಮಸ್ಯೆ ಎದುರಿಸುತ್ತಿದ್ದೇವೆ. ಇದಕ್ಕೆ ಶಾಶ್ವತ ನಿರ್ಧಾರ ಮಾಡೋಣ, ಮತ್ತೆ ಸಿಎಂಗೆ ಗಮನಕ್ಕೆ ತರೋಣ ಎಂದರು.

ರೈತ ಸಂಘದ ಚಾಮರಸ ಪಾಟೀಲ್ ಮಾತನಾಡಿ, ಬಲ್ಡೋಟಾ ವಿರುದ್ಧ ದೊಡ್ಡ ಹೋರಾಟ ಆರಂಭವಾಗಿದೆ. ಕೊಪ್ಪಳದ 20 ಹಳ್ಳಿಗಳು ಮಾತ್ರ ಬಾಧಿತ ಆಗಿಲ್ಲ. ನದಿಯು ಕಲುಷಿತವಾಗಿದೆ. ಜಲವೂ ಮಲೀನವಾಗಿದೆ. ರಾಯಚೂರು, ಬಳ್ಳಾರಿಯ ಲಕ್ಷಾತಂರ ಜನರಿಗೂ ಸಮಸ್ಯೆ ಆಗಿದೆ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಕೊಪ್ಪಳದಲ್ಲಿ 112 ಸಂಘ -ಸಂಸ್ಥೆಗಳು ಬೆಂಬಲದೊಂದಿಗೆ ಹೋರಾಟ ಮಾಡಿದ್ದಾರೆ. ಕಾರ್ಖಾನೆಗಳು ಇಂದು ನಿನ್ನೆ ಬಂದಿರುವುದು ಅಲ್ಲ 1995ಕ್ಕಿಂತ ಮೊದಲೇ ಕಾರ್ಖಾನೆ ಬಂದಿವೆ. ಆಗ ನಮ್ಮ ರೈತರೇ ಭೂಮಿ ಕೊಟ್ಟಿದ್ದಾರೆ. ಕೈಗಾರಿಕೆಗಳು ವಿಷಪೂರಿತ ಧೂಳು ಹೊಗೆ ಬಿಡುವುದು ರೈತರಿಗೆ ಗೊತ್ತಿರಲಿಲ್ಲ. ಸ್ಪಾಂಜ್ ಐರನ್ ನಿಂದ ಧೂಳು ಹೆಚ್ಚಿದೆ. ಪೂಜ್ಯರು ಸಹ ಹೋರಾಟಕ್ಕಾಗಿ ಬಂದಿದ್ದಾರೆ. ನಾವೂ ರೈತನ ಮನೆತನದಿಂದ ಬಂದಿದ್ದೇವೆ. ಅಹಿಂಸಾ ಮಾರ್ಗವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ. ನಮಗೆ ನ್ಯಾಯ ಸಿಗಲು ಚಿಂತನೆ ಮಾಡಿ ಹೋರಾಟ ಮಾಡೋಣ ಎಂದರು.

ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಿದ್ಧಬಸವ ಕಬೀರ ಸ್ವಾಮಿಗಳು, ಜೇವರ್ಗಿ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್. ರಾಜಶೇಖರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ, ಪ್ರಸನ್ನ ಗಡಾದ, ರಮೇಶ ಹ್ಯಾಟಿ, ಅಮ್ಜದ್ ಪಟೇಲ್, ಸಿ.ವಿ. ಚಂದ್ರಶೇಖರ, ಡಿ.ಎಚ್.ಪೂಜಾರ, ವೀರಣ್ಣ ಬುಳ್ಳಾ, ಎ.ವಿ‌.ಕಣವಿ, ವಿ.ಎಂ. ಭೂಸನೂರುಮಠ, ಬಿ ಬಳ್ಳೊಳ್ಳಿ, ಪೀರಾ ಹುಸೇನ್ ಹೊಸಳ್ಳಿ, ದಾನಪ್ಪ ಕವಲೂರು, ಚಂದ್ರಶೇಖರ್ ಕವಲೂರು, ಜ್ಯೋತಿ ಗೊಂಡಬಾಳ, ಕಾವ್ಯಾ ಗಡಾದ, ಸರೋಜಾ ಬಾಕಳೆ, ಮಾಲಾ ಬಡಿಗೇರ, ಸಾವಿತ್ರಿ ಮುಜುಮದಾರ್, ಎಂ.ಕೆ.ಸಾಹೇಬ್, ಮಂಜುನಾಥ ಜಿ. ಗೊಂಡಬಾಳ, ರಮೇಶ ತುಪ್ಪದ, ಕಾಶಪ್ಪ ಚಲವಾದಿ ಇತರರಿದ್ದರು. ಸದಾಶಿವ ಪಾಟೀಲ್ ಅವರಿಂದ ಪರಿಸದ ಗಾಯನ ಜರುಗಿತು.