ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ವರ್ಷ ದೇಶಾದ್ಯಂತ 216 ಜನ ಪೊಲೀಸರು ಹಾಗೂ ಪೊಲೀಸ್ ಅಧಿಕಾರಿಗಳು ಸೇವೆ ಸಲ್ಲಿಸುವಾಗ ಬಲಿಯಾಗಿದ್ದು, ಅವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದು, 24/7 ಮಾದರಿಯಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ ಹೇಳಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಕಡೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿ ಇರುವುದರಿಂದ ಸಹಜವಾಗಿಯೇ ಕರ್ತವ್ಯದಲ್ಲಿರುವ ಪೊಲೀಸರಿಗೆ ಒತ್ತಡ ಹೆಚ್ಚಾಗುತ್ತದೆ. ಸಮಾಜದಲ್ಲಿ ಕೋಮು ಗಲಭೆ ಎಬ್ಬಿಸುವವರು, ವಿವಿಧ ಮಾಫಿಯಾಗಳು ಹೆಚ್ಚಾಗುತ್ತಿರುವುದರಿಂದ ಪೊಲೀಸ್ ಇಲಾಖೆಗೆ ಇದನ್ನು ನಿಯಂತ್ರಿಸುವುದೇ ಸವಾಲಾಗಿದೆ ಎಂದರು.ಹಲವು ಮಾಫಿಯಾಗಳು ಪೊಲೀಸ್ ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ಆದರೆ, ಇಲಾಖೆಯಲ್ಲಿ ಶಿಸ್ತು ಕಲಿಸಿದ್ದರಿಂದ ನಮ್ಮ ಪೊಲೀಸರು ಕರ್ತವ್ಯ ನಿಷ್ಠೆಯಿಂದ ಸರ್ವೋಚ್ಛ ಬಲಿದಾನ ಕೊಡಲು ಹಿಂದೆ ಸರಿಯುವುದಿಲ್ಲ. ತಮ್ಮ ಪ್ರಾಣವನ್ನೇ ಅರ್ಪಿಸುತ್ತಿದ್ದು, ಅವರ ಕಾರ್ಯ ಹಾಗೂ ಜವಾಬ್ದಾರಿಯುತವಾದ ಕರ್ತವ್ಯ ಶ್ಲಾಘನೀಯವಾಗಿದೆ. ನಮ್ಮ ಪ್ರಾಣ ಹೋದರೂ ಪರವಾಗಿಲ್ಲ ಈ ಭಾರತ ದೇಶದ, ರಾಜ್ಯದ ರಕ್ಷಣೆ ಮಾಡೋಣ ಎಂದು ಮುಂದಾಗುವವರಿಗೆ ಕರ್ತವ್ಯ ನಿಷ್ಠೆ ಇದ್ದರೆ ಮಾತ್ರ ಸಾಧ್ಯ. ನಮಗೋಸ್ಕರ, ದೇಶಕ್ಕೋಸ್ಕರ ಪ್ರಾಣ ಕೊಟ್ಟವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.ವಿಜಯಪುರ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ಪ್ರಕರಣಗಳನ್ನು ಹತೋಟಿಗೆ ತರಲು ಶ್ರಮಿಸುತ್ತಿದ್ದು, ಅವರ ಸೇವೆ ಶ್ಲಾಘನೀಯವಾಗಿದೆ. ಸಾರ್ವಜನಿಕರು ಪ್ರತಿ ಕೆಲಸವು ಸರ್ಕಾರದಿಂದಲೇ ಆಗಬೇಕು. ಏನೇ ಸಮಸ್ಯೆ ಆದರೂ ಅದಕ್ಕೆ ಸರ್ಕಾರವೇ ಕಾರಣ ಎನ್ನುವಂತೆ ಹೇಳುತ್ತಾರೆ. ನಾವು ಇನ್ನೊಬ್ಬರಿಗೆ ದೂರುವ ಮೊದಲು ನಮ್ಮ ಕರ್ತವ್ಯ ಪಾಲನೆ ಮಾಡಬೇಕಿದೆ. ಕರ್ತವ್ಯ ಪಾಲನೆಯ ಕುರಿತು ಜಾಗೃತಿ ಕಾರ್ಯ ಆಗಬೇಕಿದ್ದು, ಹುತಾತ್ಮರ ಕುಟುಂಬಕ್ಕೆ ಸೂಕ್ತ ಸೌಲಭ್ಯಗಳು ಸಿಗಬೇಕು, ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.ಜಿಲ್ಲಾಧಿಕಾರಿ ಟಿ.ಭೂಬಾಲನ್ ಮಾತನಾಡಿ, 1959ರಲ್ಲಿ ಭಾರತ ಹಾಗೂ ಚೀನಾ ದೇಶಗಳ ಮಧ್ಯೆ ನಡೆದ ಘಟನೆಯಲ್ಲಿ ಹುತಾತ್ಮರಾದ ಭಾರತದ ಅನೇಕ ಪೊಲೀಸರನ್ನು ಸ್ಮರಿಸಿ ಹುತಾತ್ಮರ ದಿನಾಚರಣೆಯನ್ನು ಅ.21ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ದೇಶದ ರಕ್ಷಣೆಗಾಗಿ, ಸಮಾಜದ ರಕ್ಷಣೆಗಾಗಿ ಪೊಲೀಸರು ಸಾಕಷ್ಟು ಶ್ರಮ ವಹಿಸುತ್ತಾರೆ. ಈ ವೇಳೆ ವೀರ ಮರಣವನ್ನಪ್ಪುತ್ತಾರೆ. ಇಂತಹ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸುವುದು, ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ನಾವೆಲ್ಲ ಸುರಕ್ಷಿತವಾಗಿರಲು ಪೊಲೀಸರೇ ಕಾರಣ ಹಾಗೂ ಅವರ ಕರ್ತವ್ಯನಿಷ್ಠೆ. ದೇಶ ರಕ್ಷಣೆ ಮಾಡುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸುತ್ತೇನೆ. ಹುತಾತ್ಮರಾದ ಪೊಲೀಸರ ಹಾಗೂ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೆ ಸಹಾಯ, ಸಹಕಾರಕ್ಕೆ ನಾವೆಲ್ಲರೂ ಸದಾ ಸಿದ್ಧರಿರುವುದಾಗಿ ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ ಮಾತನಾಡಿ, ವಿಜಯಪುರದ ಪೊಲೀಸ್ ಕಾನ್ಸಟೇಬಲ್ ವಿಠ್ಠಲ ಗಡಾದಾರ ಸೇರಿ ಕರ್ನಾಟಕದ ಆರು ಪೊಲೀಸರು ಸೇರಿದಂತೆ ಭಾರತದಾದ್ಯಂತ 216 ಜನ ಹುತಾತ್ಮರಾಗಿದ್ದಾರೆ. ಹುತಾತ್ಮರ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬಗಳಿಗೆ ಪ್ರತಿವರ್ಷ ಅ.21ರಂದು ಗೌರವ ಸಮರ್ಪಣೆ ಮಾಡಲಾಗುತ್ತದೆ ಎಂದರು.ಪೊಲೀಸ್ ಕವಾಯತು ಮೈದಾನದಲ್ಲಿ ಹಲವು ಗಣ್ಯರು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಸಮರ್ಪಿಸಿ ಗೌರವಿಸಿದರು. ಇದೇ ವೇಳೆ ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿ ಹುತಾತ್ಮರಿಗೆ ಗೌರವಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪೊಲೀಸರು, ಪೊಲೀಸ್ ಅಧಿಕಾರಿಗಳು, ಅವರ ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.ನಾವೆಲ್ಲರೂ ಕೇವಲ ನಮ್ಮ ಹಕ್ಕುಗಳನ್ನು ಮಾತ್ರ ನೋಡುತ್ತೇವೆ, ಆದರೆ, ನಮ್ಮ ಕರ್ತವ್ಯಗಳನ್ನು ನೋಡುತ್ತಿಲ್ಲ. ರಾಜ್ಯದ ಎಂಟು ಕೋಟಿ ಜನರಿಗೆ ಪ್ರತಿ ಮನೆಗೆ ರಕ್ಷಣೆ ಕೊಡಲು ಆಗುವುದಿಲ್ಲ. ಹಳ್ಳಿಗಳಲ್ಲಿ ಅಪರಾಧಗಳಾದಲ್ಲಿ ಜನರು ಸಾಕ್ಷಿ ಕೊಡಲು ಮುಂದೆ ಬರುತ್ತಿಲ್ಲ. ಸಾಕ್ಷಿ ಆಧಾರದ ಮೇಲೆ ತೀರ್ಪು ಕೊಡಬೇಕಾದರೆ ಎಲ್ಲರೂ ತಮ್ಮ ತಮ್ಮ ಕರ್ತವ್ಯ ನಿಭಾಯಿಸಬೇಕಿದೆ.
ಶಿವಾಜಿ ನಲವಡೆ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರು.