ಐಸ್‌ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಕೈ ಬಿಡಲು ಒತ್ತಾಯ

| Published : Apr 11 2025, 12:33 AM IST

ಸಾರಾಂಶ

ಚಾಮರಾಜನಗರದಲ್ಲಿ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗ ಪ್ರಸಾದ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರತಾಲೂಕಿನ ಕುದೇರಿನ ಚಾಮುಲ್‌ನಲ್ಲಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ನಿರ್ಣಯವನ್ನು ಹಿಂಪಡೆಯಬೇಕು ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಲಿಂಗ ಪ್ರಸಾದ್‌ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ 83 ಕೋಟಿ ವೆಚ್ಚದಲ್ಲಿ ಚಾಮುಲ್‌ ಸ್ಥಾಪನೆ ಮಾಡಲಾಗಿದ್ದು, ಸರ್ಕಾರ 30 ಕೋಟಿ ರು. ಅನುದಾವನ್ನು ಬಿಡುಗಡೆ ಮಾಡಿತ್ತು. 50 ಕೋಟಿ ರು.ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ. 50 ಕೋಟಿ ರು.ಬ್ಯಾಂಕ್‌ ಸಾಲಕ್ಕೆ 8 ಕೋಟಿ ರು. ಬಡ್ಡಿಯನ್ನು ಚಾಮುಲ್ ಕಟ್ಟುತ್ತಿದೆ. ಈ ಸಂದರ್ಭದಲ್ಲಿ ಐಸ್‌ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ನಿರ್ಣಯ ಸರಿಯಲ್ಲ ಎಂದರು.

ಸಾಲಮುಕ್ತ ಚಾಮುಲ್‌ ಮಾಡಲು ಆಡಳಿತ ವರ್ಗ ಮುಂದಾಗಬೇಕು, ಐಸ್‌ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಈ ಸಂದರ್ಭದಲ್ಲಿ 50 ರಿಂದ 60 ಕೋಟಿ ರು. ಬ್ಯಾಂಕಿನಿಂದ ಸಾಲ ಮಾಡಬೇಕಾಗುತ್ತದೆ. ಇದರಿಂದ 100 ರಿಂದ 110 ಕೋಟಿ ರು.ಸಾಲದ ಹೊರೆ ಹೆಚ್ಚಾಗಲಿದೆ. ಅಲ್ಲದೇ ಐಸ್‌ ಕ್ರೀಂ ಉತ್ಪಾದನೆಯಿಂದ ಚಾಮುಲ್‌ ಲಾಭಗಳಿಸುವುದಕ್ಕಿಂತ ನಷ್ಟ ಅನುಭವಿಸಬೇಕಾತ್ತದೆ ಇದರಿಂದ ಚಾಮುಲ್‌ ಮುಚ್ಚುವ ಪರಿಸ್ಥಿತಿ ತಲುಪಲಿದೆ ಎಂದರು. ಚಾಮುಲ್‌ನಲ್ಲಿ ರೈತರಿಗೆ ನೀಡುತ್ತಿದ್ದ ಹಾಲಿನ ಹಣದಲ್ಲಿ ಒಂದು ರು. ಕಡಿತ ಮಾಡಿ ಚಾಮುಲ್‌ಗೆ 4 ಕೋಟಿ ಲಾಭ ಬಂದಿದೆ ಎಂದು ತೋರಿಸಿ 80 ಲಕ್ಷ ರು. ಅನ್ನು ಸಿಬ್ಬಂದಿಗೆ ಬೋನಸ್‌ ನೀಡಲಾಗಿದೆ. ರೈತರ ಹೊಟ್ಟೆ ಮೇಲೆ ಹೊಡೆದು ಆಡಳಿತ ವರ್ಗ ಬೋನಸ್‌ ಪಡೆದುಕೊಂಡಿದೆ ಎಂದರು. ಈ ತಿಂಗಳ ಕೊನೆ ತನಕ ಸಮಯ ಕೊಡಲಾಗುತ್ತದೆ. ಒಂದು ವೇಳೆ ಘಟಕ ಸ್ಥಾಪನೆ ಕೈಬಿಡದಿದ್ದರೆ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಚ್‌ ಎಂ ಮಹೇಶ್‌, ರಾಚೇಗೌಡ ಇದ್ದರು.