ಗರ್ಭಿಣಿ ವರ್ಷಿತಾ ವರಿಸಲು ಒತ್ತಡವೇ ಹತ್ಯೆಗೆ ಕಾರಣ

| Published : Aug 22 2025, 12:00 AM IST

ಸಾರಾಂಶ

ಚಿತ್ರದುರ್ಗ ನಾಗರಿಕ ಸಮಾಜದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಲೇಜು ವಿದ್ಯಾರ್ಥಿನಿ ವರ್ಷಿತಾಳ ಕೊಲೆ ಬೇಧಿಸುವಲ್ಲಿ ಚಿತ್ರದುರ್ಗ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಚೇತನ್ ಎಂಬುವಾತನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಚಿತ್ರದುರ್ಗ: ಚಿತ್ರದುರ್ಗ ನಾಗರಿಕ ಸಮಾಜದ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಲೇಜು ವಿದ್ಯಾರ್ಥಿನಿ ವರ್ಷಿತಾಳ ಕೊಲೆ ಬೇಧಿಸುವಲ್ಲಿ ಚಿತ್ರದುರ್ಗ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಚೇತನ್ ಎಂಬುವಾತನ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಕೆಳಗೋಟೆ ಬಡಾವಣೆ ನಿವಾಸಿ ಆರೋಪಿ ಚೇತನ್(20) ಗಂಗಾವತಿಯ ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದಾನೆ. ಕಳೆದ 11ತಿಂಗಳ ಹಿಂದೆ ವಿದ್ಯಾರ್ಥಿನಿ ವರ್ಷಿತಾ ಪರಿಚಯ ಆಗಿ ವರ್ಷಿತಾಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಪರಿಚಯ ಪ್ರೇಮಕ್ಕೆ ತಿರುಗಿ ಸಲುಗೆ ಬೆಳೆದಿತ್ತು ಎಂದು ವಿವರಿಸಿದರು. ಚೇತನ್‌ಗೆ ಕ್ಯಾನ್ಸರ್ ಮೂರನೇ ಹಂತದಲ್ಲಿರುವುದು ಗೊತ್ತಾಗಿ. ವರ್ಷಿತಾ ಆತನಿಂದ ದೂರವಿರಲು ಯತ್ನಿಸಿದ್ದಳು. ಬೇರೊಬ್ಬ ಯುವಕನ ಜತೆ ಸಲುಗೆಯಿಂದ ಇರ ತೊಡಗಿದ್ದಳು. ಈ ನಡುವೆ ವಿದ್ಯಾರ್ಥಿನಿ ವರ್ಷಿತಾ ಗರ್ಭಿಣಿ ಆಗಿರುವ ಸಂಗತಿ ಬಯಲಾಗಿತ್ತು. ವರ್ಷಿತಾಳ ಚಿಕ್ಕಮ್ಮ‌ ಕೆಲ ದಿನಗಳ ಹಿಂದೆ ಕರೆ ಮಾಡಿ ಮದುವೆ ಆಗುವಂತೆ ಚೇತನ್ ಗೆ ಒತ್ತಡ ಹೇರಿದ್ದಾಳೆ. ಆವಾಗಲೇ ವರ್ಷಿತಾಳ ಹತ್ಯೆಗೆ ಚೇತನ್ ಸಂಚು ರೂಪಿಸಿದ್ದಾನೆ. ಆಗಸ್ಟ್ 14ಕ್ಕೆ ವರ್ಷಿತಾ ಲೀವ್ ಲೆಟರ್ ನೀಡಿ ಹಾಸ್ಟೆಲ್‌ನಿಂದ ಹಿರಿಯೂರಲ್ಲಿರಲ್ಲಿರುವ ಚಿಕ್ಕಮ್ಮಳ ಮನೆಗೆ ತೆರಳಿದ್ದಳು. ಆ.18ಕ್ಕೆ ಕರೆ ಮಾಡಿ ಚಿತ್ರದುರ್ಗಕ್ಕೆ ಕರೆಸಿಕೊಂಡಿದ್ದ ಚೇತನ್ ವರ್ಷಿತಾ ಬರುವ ಮುನ್ನ ಪೆಟ್ರೋಲ್ ಖರೀಧಿಸಿದ್ದ. ಚಿತ್ರದುರ್ಗ ಹೊರವಲಯ ಗೋನೂರು ಗ್ರಾಮದ ಬಳಿಗೆ ಕರೆದೊಯ್ದು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತರ ಸಾಕ್ಷ್ಯ ನಾಶ ಮಾಡಲು ಪೆಟ್ರೋಲ್‌ ಸುರಿದು ಬೆಂಕಿಯಿಟ್ಟಿದ್ದಾನೆಂದು ಎಸ್ಪಿ ವಿವರಿಸಿದರು.ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ಕೈಗೊಂಡಿದ್ದೇವೆ. ಅತ್ಯಂತ ತ್ವರಿತಗತಿಯಲ್ಲಿ ಪ್ರಕರಣ ಭೇದಿಸಿದ ಡಿವೈಎಸ್ಪಿ ದಿನಕರು ಹಾಗೂ ಪಿಐ ಮುದ್ದುರಾಜ್ ತಂಡಕ್ಕೆ ಬಹುಮಾನ ಘೋಷಿಸಿದ್ದೇವೆ. ವರ್ಷಿತಾಳ ಶವದ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದ ನಂತರ ಎಲ್ಲವೂ ಖಚಿತವಾಗುತ್ತದೆ ಎಂದು ಎಸ್ಪಿ ರಂಜಿತ್ ಕುಮಾರ್ ಮಾಹಿತಿ ನೀಡಿದರು. ಸಿಸಿ ಟಿವಿಯಲ್ಲಿ ಪೆಟ್ರೋಲ್ ಖರೀದಿ ಬಯಲು

ಕೊಲೆ ಸಂಚು ರೂಪಿಸಿ ವರ್ಷಿತಾಳನ್ನು ಕರೆಸಿದ್ದ ಚೇತನ್ ಆಕೆ ಬರುವ ಮುನ್ನಾ ಖಾಸಗಿ ಬಂಕ್‌ನಲ್ಲಿ ಪೆಟ್ರೋಲ್ ಖರಿದಿಸಿದ್ದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆ ಆಗಿವೆ. ತುರುವನೂರು ರಸ್ತೆಯ ಖಾಸಗಿ ಬಂಕ್‌ನಲ್ಲಿ ಪೆಟ್ರೋಲ್ ಖರೀದಿಸಿ ಪ್ಯಾಂಟ್ ಜೇಬಿನಲ್ಲಿ ಇರಿಸಿಕೊಂಡಿದ್ದ. ವರ್ಷಿತಾ ಬಂದ ಬಳಿಕ ನಡೆದುಕೊಂಡೇ ಗೋನೂರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸುಟ್ಟಿದ್ದಾನೆ. ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ ಖಂಡಿಸಿ ವಿಶ್ವಹಿಂದೂ ಪರಿಷದ್, ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿಸಿ ಕಚೇರಿಗೆ ಮನವಿಸಲ್ಲಿಸಿದರು. ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.