ಗಣೇಶ್‌ಗೆ ಪ್ರತಿಷ್ಠೆ, ನಿರಂಜನ್‌ಗೆ ಅಸ್ತಿತ್ವದ ಪ್ರಶ್ನೆ!

| Published : May 01 2024, 01:17 AM IST

ಗಣೇಶ್‌ಗೆ ಪ್ರತಿಷ್ಠೆ, ನಿರಂಜನ್‌ಗೆ ಅಸ್ತಿತ್ವದ ಪ್ರಶ್ನೆ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಶೇ.೮೨.೩೮ ಮತದಾನ ನಡೆದಿದ್ದು, ಈ ಲೋಕಸಭೆ ಚುನಾವಣೆಯು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಪ್ರತಿಷ್ಠೆಯಾದರೆ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಶೇ.೮೨.೩೮ ಮತದಾನ ನಡೆದಿದ್ದು, ಈ ಲೋಕಸಭೆ ಚುನಾವಣೆಯು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಪ್ರತಿಷ್ಠೆಯಾದರೆ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ.

ಕಳೆದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ೧,೦೭,೧೦೧ ಮತ ಪಡೆದು, ಬಿಜೆಪಿ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ವಿರುದ್ಧ ೩೬ ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಜಯಸಾಧಿಸಿದ್ದರು. ಆದರೀಗ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ (ಇಬ್ಬರು) ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದು ತಮ್ಮ ಪ್ರಾಬಲ್ಯ ಮರೆಯಲು ಲೋಕಸಭೆ ಚುನಾವಣೆ ಎದುರಾಗಿದೆ.

೨೦೧೯ರ ಲೋಕಸಭೆ ಚುನಾವಣೆಯ ಸಮಯದಲ್ಲಿ ಸಿ.ಎಸ್.ನಿರಂಜನ್‌ ಕುಮಾರ್‌ ಗುಂಡ್ಲುಪೇಟೆ ಶಾಸಕರಾಗಿದ್ದರು. ಲೋಕಸಭೆ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‌ ಪ್ರಸಾದ್‌ಗೆ ಕಾಂಗ್ರೆಸ್‌ ಅಭ್ಯರ್ಥಿ ಆರ್.ಧ್ರುವನಾರಾಯಣಗಿಂತ ೧೫ ಸಾವಿರಕ್ಕೂ ಹೆಚ್ಚು ಲೀಡ್‌ ಬಿಜೆಪಿಗೆ ಬಂದಿತ್ತು. ಈಗ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾಗಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್‌ ಸರ್ಕಾರವಿದೆ. ಲೋಕಸಭೆ ಚುನಾವಣೆಯಲ್ಲಿ ಗಣೇಶ್‌ ಪ್ರಸಾದ್‌ ಅವರ ಸ್ನೇಹಿತ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ ಸ್ಪರ್ಧಿಸಿದ್ದಾರೆ. ಕಳೆದ ಲೋಕಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ೧೫ ಸಾವಿರಕ್ಕೂ ಹೆಚ್ಚು ಲೀಡ್‌ ಬಂದಿತ್ತು. ಈಗ ಗಣೇಶ್‌ ಪ್ರಸಾದ್‌ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್‌ ಕೊಡಿಸಲು ಮುಂದಾಗಿದ್ದಾರೆ.

ಕ್ಷೇತ್ರದ ಕಾಂಗ್ರೆಸ್‌ ಪಡೆಯೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಬಿಜೆಪಿಗಿಂತ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ಕೊಡಿಸಲು ಶ್ರಮ ಹಾಕಿದ್ದಾರೆ. ಆದರೆ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಕೂಡ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಲೀಡ್‌ ಕೊಡಿಸಲು ಶ್ರಮಿಸಿದ್ದಾರೆ.

ಗಣೇಶ್‌ಗೆ ಪ್ರತಿಷ್ಠೆ?: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ೩೬ ಸಾವಿರಕ್ಕೂ ಹೆಚ್ಚು ಲೀಡ್‌ ಪಡೆದು ಗೆಲುವು ಸಾಧಿಸಿದ್ದು ಈಗ ಕಾಂಗ್ರೆಸ್‌ ಅಭ್ಯರ್ಥಿಗೆ ಲೀಡ್‌ ಕೊಡಿಸಿ ಕ್ಷೇತ್ರದಲ್ಲಿ ತಮ್ಮ ಪ್ರಾಭಲ್ಯ ಹೆಚ್ಚಿಸಿಕೊಳ್ಳಲು ಹವಣಿಸುತ್ತಿದ್ದಾರೆ.

ನಿರಂಜನ್‌ಗೆ ಅಸ್ತಿತ್ವ?: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದೆ ಎಂದು ಬೀಗುತ್ತಿದ್ದ ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ನಿರೀಕ್ಷೆಗೂ ಮೀರಿ ಸೋಲು ಕಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಾದ ಸೋಲು ಮರೆಯಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಲೀಡ್‌ ಪಡೆದು ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ನರೇಂದ್ರ ಮೋದಿ ಹವಾ ಫಲಿಸುವುದೇ?:

ಪ್ರಧಾನಿ ಮೋದಿ ಹವಾದ ಜೊತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜೋಶ್‌ ಕೆಲಸ ಮಾಡಿದ್ದೇ ಆದರೆ ಕಾಂಗ್ರೆಸ್‌ ಗಿಂತ ಹೆಚ್ಚು ಮತ ಪಡೆಯಲು ಸಾದ್ಯವಿಲ್ಲದಿದ್ದರೂ ಕಾಂಗ್ರೆಸ್‌ ನಷ್ಟು ಅಥವಾ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂಬುದು ಬಿಜೆಪಿಗರ ಲೆಕ್ಕಾಚಾರ.

ಗ್ಯಾರಂಟಿ ಹವಾ?: ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾದ ಬಳಿಕವೂ ಹಮ್ಮು, ಬಿಮ್ಮು ಇಲ್ಲದೆ ಕ್ಷೇತ್ರದಲ್ಲಿ ಓಡಾಡಿಕೊಂಡು ಜನರ ಕೆಲಸ ಮಾಡುತ್ತಿರುವ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಕಾಂಗ್ರೆಸ್‌ ಕೈ ಹಿಡಿದರೆ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಂದ ಲೀಡ್‌ನಷ್ಟೆ ಲೀಡ್‌ ಬರಲಿದೆ. ಮೋದಿ ಹೆಸರಲ್ಲಿ ಯುವಕರು ಕಮಲದತ್ತ ಮುಖ ಮಾಡಿದರೆ ಕಾಂಗ್ರೆಸ್‌ಗೆ ಲೀಡ್‌ ಕಡಿಮೆ ಆಗಲಿದೆ ಎಂಬ ಮಾತಿದೆ. ಏನೇ ಆದರೂ ಲೋಕಸಭೆ ಚುನಾವಣೆಯ ಫಲಿತಾಂಶ ಬರೋ ತನಕ ಕಾದು ನೋಡಬೇಕಿದೆ.