ಸಾರಾಂಶ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತ ಕಾರ್ಯಕ್ರಮದಲ್ಲಿ ಸಿಡಿಪಿಒ ಹರಿಪ್ರಸಾದ್
ಕನ್ನಡಪ್ರಭ ವಾರ್ತೆ ಪರಶುರಾಂಪುರ
ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಅದನ್ನು ತೆಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಡಿಪಿಒ ಹರಿಪ್ರಸಾದ್ ತಿಳಿಸಿದರು.ಗ್ರಾಮದ ವೇದಾವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ 18 ವರ್ಷದೊಳಗಿನ ಮಹಿಳೆಯರೊಂದಿಗೆ ಮದುವೆಯಾದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಈ ಕಾಯ್ದೆಯ ಪ್ರಕಾರ ಬಾಲ್ಯ ವಿವಾಹದಲ್ಲಿ ಹುಡುಗ-ಹುಡುಗಿಯ ತಂದೆ ತಾಯಿ ಅಲ್ಲದೇ ಸಂಬಂಧಪಟ್ಟ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಲ್ಲದೆ ತಪ್ಪಿತಸ್ಥರಿಗೆ ಕಾರಾಗೃಹ ವಾಸ ಮತ್ತು ದಂಡ ಎರಡನ್ನು ವಿಧಿಸಬಹುದು ಎಂದು ತಿಳಿಸಿದರು.ಒಂದು ವೇಳೆ ಬಾಲ್ಯ ವಿವಾಹಗಳು ಕಂಡು ಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098, ಪೋಲಿಸ್ ಸಹಾಯವಾಣಿ 112, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂರವಾಣಿ ಸಂಖ್ಯೆ 08482-234050 ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ದೂರವಾಣಿ ಸಂಖ್ಯೆ 08482-235714 ಗೆ ಕರೆ ಮಾಡಲು ತಿಳಿಸಿದರು.
ಬಾಲ್ಯ ವಿವಾಹ ಮುಕ್ತ ಗ್ರಾಮಗಳನ್ನಾಗಸಿಲು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆರೊಂದಿಗೆ ಕೈ ಜೋಡಿಸೋಣ ಎಂದು ಡಾ. ಕುಬೇರ್ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು.