ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ, ಮಂಡಿಯಲ್ಲಿ ಕೈ ತುಂಬಾ, ಬಾಕ್ಸ್ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿಯಾಗಿ ಮಾವಿನ ಹಣ್ಣುಗಳೆ ತುಂಬಿದ್ದವು.
ಹೋಲ್‌ಸೇಲ್ ವರ್ತರಿಗೆ ಕಹಿಯಾದ ಮಾವು । ಎಲ್ಲೆಡೆ ಅತ್ಯಧಿಕ ಫಸಲು । ಹಾಕಿದ ಬಂಡವಾಳ ಪಡೆಯಲು ಎಣಗುವ ಸ್ಥಿತಿ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಮಾರುಕಟ್ಟೆಯಲ್ಲಿ ಮಾವಿಗೆ ಬೆಲೆ ಇಲ್ಲದೆ ರಾಶಿಯಲ್ಲೇ ಕೊಳೆಯಲು ಮುಂದಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬೆಲೆ ಏರಿಕೆಯತ್ತ ಮುಖ ಮಾಡಿದ್ದ ಮಾವು ಬೆಳೆಗಾರನಲ್ಲಿ ಸಂತಸ ಮೂಡಿಸಿತ್ತು. ಆದರೆ 15 ದಿನ ಕಳೆಯುವುದರಲ್ಲಿ ಏಕಾಏಕಿ ಬೆಲೆ ಕುಸಿತಗೊಂಡು ಬೆಳೆಗಾರನ ಕಣ್ಣಲ್ಲಿ ರಕ್ತ ಬರಿಸುವಂತೆ ಮಾಡಿದೆ.
ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ, ಮಂಡಿಯಲ್ಲಿ ಕೈ ತುಂಬಾ, ಬಾಕ್ಸ್ ಗಳಲ್ಲೂ ಮತ್ತು ನೆಲದ ಮೇಲೂ ರಾಶಿ ರಾಶಿಯಾಗಿ ಮಾವಿನ ಹಣ್ಣುಗಳೆ ತುಂಬಿದ್ದವು. ಜಿಲ್ಲೆಯಲ್ಲಿ ಈ ಬಾರಿ ಮಾವಿನ ಹಣ್ಣುಗಳ ಬೆಳೆ ನೂರಕ್ಕೆ ಶೇ. 90ರಷ್ಟು ಚೆನ್ನಾಗಿಯೇ ಬೆಳೆದು ಉತ್ತಮ ಫಸಲು ರೈತನ ಕೈ ಸೇರಿದೆ. ಉತ್ತಮ ಬೆಲೆ ಸಿಗುತ್ತೆ ಎಂಬ ಆಸೆಯಿಂದ ಮಾರುಕಟ್ಟೆಗೆ ತಂದರೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಬೆಲೆಗೆ ಮಾವು ಮಾರಾಟವಾಗುತ್ತಿದೆ. ಹಾಕಿದ ಬಂಡವಾಳ ವಾಪಸ್ಸು ಬಾರದೆ ಮಾವು ಬೆಳೆಗಾರ ಕಂಗಾಲಾಗಿದ್ದಾರೆ. ಒಂದು ವರ್ಷದಿಂದ ರೈತ, ಮಾವಿನ ಹಣ್ಣುಗಳನ್ನು ಊಜಿನೊಣಗಳು, ತಿಗಣೆಗಳಿಂದ ಮತ್ತು ಮಳೆ, ಗಾಳಿಗೆ ಸಿಲುಕದೆ ಜೋಪಾನವಾಗಿ ಕಾಪಾಡಿಕೊಂಡು ಬೆಳೆದು ಮಾರುಕಟ್ಟೆಗೆ ತಂದರೆ ಬೆಲೆ ಇಲ್ಲ, ಹತ್ತು ಇಪ್ಪತ್ತು ರು.ನಂತೆ ಅಗ್ಗದ ಬೆಲೆಗೆ ಮಾರಾಟ ಆಗುತ್ತಿದೆ. ಅತ್ತ ಬಿಸಾಡಲು ಮನಸ್ಸಿಲ್ಲದೆ ಇತ್ತ ಉತ್ತಮ ಬೆಲೆಯೂ ಇಲ್ಲದೆ ಮಾರುಕಟ್ಟೆಯಲ್ಲಿಯೇ ಕೊಳೆಯುವಂತಾಗಿದೆ .
ದೀಢಿರ್ ಬೆಲೆ ಕುಸಿತ:ಜಿಲ್ಲೆಯಲ್ಲಿ ರೈತ 40ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಬೆಳೆದಿದ್ದಾನೆ. ಚಿಕ್ಕಬಳ್ಳಾಪುರದ ಮಾವಿನ ಹಣ್ಣು ಹೊರ ದೇಶಗಳಿಗೆ ಉತ್ತಮ ದರಕ್ಕೆ ರಪ್ತಾಗುತಿತ್ತು. ಕಳೆದ ಬಾರಿಗೆ ಹೋಲಿಸಿಕೊಂಡರೇ ಮಾವಿನ ಹಣ್ಣಿನ ಬೆಲೆಯಲ್ಲಿ ಬಾರಿ ಕುಸಿತ ಕಂಡಿದೆ. ಇಮಾಯತ್ ಮಾವಿನ ಹಣ್ಣಿನ ಬೆಲೆ 70 ರು.ನಿಂದ ರಿಂದ 50 ರು.ಗೆ ಕುಸಿದಿದ್ದರೆ, ಮಲ್ಲಿಕಾ 50 ರಿಂದ 30 ರು.ಗಳಿಗೆ, ಸಿಂಧೂರ 20 ರಿಂದ 12 ರು.ಗಳಿಗೆ, ರಸಪೂರಿ 40 ರಿಂದ 20 ರು.ಗಳಿಗೆ, ಬೆನಿಷಾ 20ರಿಂದ 15 ರು., ತೋತಾಪೂರಿ 20 ರಿಂದ ಐದಾರು ರು.ಗಳಿಗೆ ಕುಸಿದಿದೆ, ಬೆಲೆ ಕುಸಿಯಲು ಮಾರುಕಟ್ಟೆಯ ಏಜೆಂಟರುಗಳನ್ನು ಕೇಳಿದಾಗ ಅವರು ಈ ಬಾರಿ ಕೋಲಾರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳು ಸೇರಿದಂತೆ ನೆರಯ ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿಯೂ ಎತೇಚ್ಚವಾಗಿ ಮಾವಿನ ಫಸಲು ಬಂದಿದ್ದು, ಎಲ್ಲವೂ ಎಕ ಕಾಲಕ್ಕೆ ಮಾರುಕಟ್ಟೆಗೆ ಬಂದಿದ್ದರಿಂದ ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎನ್ನುತ್ತಿದ್ದಾರೆ.
ಹಣ್ಣುಗಳ ರಾಜ ಅಂತಲೇ ಫೇಮಸ್ ಆಗಿರುವ ಮಾವಿನ ಹಣ್ಣಿಗೆ ಕಳೆದ ಆರು ವರ್ಷಗಳಲ್ಲಿ ಎರಡು ವರ್ಷಗಳು ಕೊರೋನಾದಿಂದ ಮಾರುಕಟ್ಟೆ ದೊರೆಯಲಿಲ್ಲ. ಕಳೆದ ವರ್ಷ ಇಳುವರಿ ಕಡಿಮೆಯಾಗಿ ವ್ಯಾಪಾರಿಗಳು ದಳ್ಳಾಳಿಗೆ ಲಾಭವಾಗಿ ರೈತನಿಗೆ ನಷ್ಟವಾದರೆ ಈ ಬಾರಿ ಉತ್ತಮ ಫಸಲು ಬಂದರೂ ಬೆಲೆ ಇಲ್ಲದೆ ರೈತನಿಗೆ ನಷ್ಟ ಉಂಟಾಗಿದೆ. ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಸಹಾ ರೈತರಿಗೆ ಅದರ ಫಲ ಸರಿಯಾಗಿ ಸಿಗುತ್ತಿಲ್ಲ. ಆದರೆ ಚಿಲ್ಲರೆ ಮಾರಾಟಗಾರರಿಗೆ ಮಾತ್ರ ಅಧಿಕ ಲಾಭ ಸಿಗುತ್ತಿದೆ.ಚಿಲ್ಲರೆ ಮಾರಾಟಗಾರರು ಕೆಜಿ ಮಾವಿಗೆ ಕನಿಷ್ಠ 60 ರಿಂದ 100 ರು.ಗಳಿಗೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದಾರೆ. ತೋತಾಪುರಿ ಮಾವನ್ನು ರೈತರಿಂದ ಕೆಜಿಗೆ ರು. 3 ರಿಂದ 6 ರು.ಗಳಿಗೆ ಕೊಂಡು 3 ಕೆಜಿಗೆ 100 ರು.ಗೆ, ನೀಲಂ ಕೆಜಿಗೆ ರು.5 ರಿಂದ 6 ರು.ಗಳಿಗೆ ಕೊಂಡು ಒಂದೂವರೆ ಕೆಜಿಗೆ 100 ರು.ಗಳಂತೆ ಮಾರಾಟ ಮಾಡುತ್ತಿದ್ದು, ಮಾವು ಬೆಳೆದ ರೈತರಿಗೆ ಹುಳಿಯಾದ ಮಾವು ಚಿಲ್ಲರೆ ಮಾರಾಟಗಾರರಿಗೆ ಸಿಹಿಯಾಗಿದೆ. ಅಧಿಕವಾಗಿ ಮಂಡಿಗಳಿಗೆ ಬಂದಿರುವ ಮಾವು ಕೊಳ್ಳುವವರಿಲ್ಲದೇ ಕೊಳೆಯುತ್ತಿದ್ದು ಸಗಟು ಮಾರಾಟಗಾರರು ತಿಪ್ಪೆಗೆಸೆಯುತ್ತಿದ್ದಾರೆ.
ಸಿಕೆಬಿ-2 ಮಂಡಿಯಲ್ಲಿ ಕೊಳ್ಳುವವರಿಲ್ಲದೇ ಕೊಳೆಯುತ್ತಿರುವ ಮಾವು ತಿಪ್ಪೆಯಲ್ಲಿ ರಾಶಿಯಾಗಿ ಬಿದ್ದಿರುವುದು.