ಸಾರಾಂಶ
ದಿನದಿಂದ ದಿನಕ್ಕೆ ಈರುಳ್ಳಿ ದರ ಕುಸಿತವಾಗುತ್ತಿದೆ. ಗುರುವಾರ ಪ್ರತಿ ಕ್ವಿಂಟಲ್‌ಗೆ ₹ 100ರಿಂದ ಗರಿಷ್ಠ ₹ 1500ರ ವರೆಗೆ ಮಾತ್ರ ಟೆಂಡರ್ನಲ್ಲಿ ದರ ನಿಗದಿಯಾಗಿತ್ತು.
ಹುಬ್ಬಳ್ಳಿ:
ಈರುಳ್ಳಿ ದರ ಕುಸಿತವಾಗಿರುವುದನ್ನು ಖಂಡಿಸಿ ಬುಧವಾರ ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದ್ದ ರೈತರು, ಗುರುವಾರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ, ಇದೇ ಪರಿಸ್ಥಿತಿ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿ ಅಕ್ಕಪಕ್ಕದ ಹಲವು ಜಿಲ್ಲೆಗಳಿಂದ ಹುಬ್ಬಳ್ಳಿ ಎಪಿಎಂಸಿಗೆ ಈರುಳ್ಳಿ ಆವಕವಾಗುತ್ತದೆ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ದರ ಕುಸಿತವಾಗುತ್ತಿದೆ. ಗುರುವಾರ ಪ್ರತಿ ಕ್ವಿಂಟಲ್‌ಗೆ ₹ 100ರಿಂದ ಗರಿಷ್ಠ ₹ 1500ರ ವರೆಗೆ ಮಾತ್ರ ಟೆಂಡರ್ನಲ್ಲಿ ದರ ನಿಗದಿಯಾಗಿತ್ತು. ಸ್ಥಳೀಯ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಎಪಿಎಂಸಿಗೆ ಬರುತ್ತಿದ್ದು, ವರ್ತಕರು ತೇವಾಂಶದ ನೆಪ ಹೇಳಿ ದರವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ಕಾರ್ಯದರ್ಶಿ ಅವರನ್ನು ಭೇಟಿಯಾದ ರೈತರು, ಈರುಳ್ಳಿ ದರ ಕುಸಿತವಾಗದಂತೆ ನೋಡಿಕೊಳ್ಳಬೇಕು. ವರ್ತಕರು ತೇವಾಂಶದ ನೆಪ ಹೇಳಿ ಕಡಿಮೆ ಬೆಲೆಗೆ ನಿಗದಿಪಡಿಸುತ್ತಿದ್ದಾರೆ. ಆದಕಾರಣ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಜತೆಗೆ ಸರ್ಕಾರವೇ ಈರುಳ್ಳಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಈ ಕೆಲಸ ಮಾಡದಿದ್ದರೆ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.