ದರ ಕುಸಿತ, ಈರುಳ್ಳಿ ಬೆಳೆ ಹರಗುತ್ತಿರುವ ರೈತರು

| Published : Nov 08 2025, 02:15 AM IST

ಸಾರಾಂಶ

ರೈತರು ಕಟಾವಿನ ಸಂಭ್ರಮದಲ್ಲಿ ಇರಬೇಕಾದವರು, ಈಗ ತಾವು ಬೆಳೆದ ಬೆಳೆಯನ್ನು ಹರಗುತ್ತಿರುವುದನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಈರುಳ್ಳಿ ಉತ್ತಮ ಫಸಲು ಬಂದಿದ್ದು, ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಬೇಕಾದ ಸಮಯ. ಆದರೆ, ಮಾರುಕಟ್ಟೆಯಲ್ಲಿ ದರ ಪಾತಾಳಕ್ಕೆ ಕುಸಿದಿರುವುದರಿಂದ ಕಟಾವು ಮಾಡಿದರೂ ಖರ್ಚು ಬರುವುದಿಲ್ಲ ಎಂದು ರೈತರು ಈರುಳ್ಳಿ ಬೆಳೆ ಕಟಾವು ಮಾಡದೇ ಹರಗುತ್ತಿದ್ದಾರೆ.

ರೈತರು ಕಟಾವಿನ ಸಂಭ್ರಮದಲ್ಲಿ ಇರಬೇಕಾದವರು, ಈಗ ತಾವು ಬೆಳೆದ ಬೆಳೆಯನ್ನು ಹರಗುತ್ತಿರುವುದನ್ನು ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ.

ಈರುಳ್ಳಿ ದರ ತೀರಾ ಕುಸಿದಿದೆ. ಇದೀಗ ಮಾರುಕಟ್ಟೆಯಲ್ಲಿ 50 ಕೆಜಿ ಈರುಳ್ಳಿಯ ಮೂಟೆಗೆ ಕೇವಲ ₹200. ಮೂಟೆ ಹಾಕಿಕೊಂಡು ಬಂದ ಬಾಡಿಗೆಯೇ ನೂರು ರುಪಾಯಿ. ಕಟಾವು ಮಾಡುವುದಕ್ಕೆ ₹50 ಕೊಡಬೇಕು. ಇನ್ನು ದಲಾಲಿ, ಹಮಾಲಿ ಸೇರಿದಂತೆ ರೈತನಿಗೆ ನಯಾಪೈಸೆಯೂ ಉಳಿಯುವುದಿಲ್ಲ. ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿ ಲೆಕ್ಕದಲ್ಲಿ ಈಗ ಮಾರುತ್ತಲೇ ಇಲ್ಲ. ಹತ್ತು ಕೆಜಿ, ಐದು ಕೆಜಿಯಂತೆ ಮಾರುತ್ತಿದ್ದಾರೆ. ಈ ಮೊದಲು ಒಂದು ಕೆಜಿ ಈರುಳ್ಳಿಗೆ ಇದ್ದ ದರ ಇದೀಗ ಐದು- ಹತ್ತು ಕೆಜಿಗೆ ಇದೆ. ಅಷ್ಟೊಂದು ದರ ಮಾರುಕಟ್ಟೆಯಲ್ಲಿ ಕುಸಿದಿದೆ.

ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಮಹೇಶ ಕರಡ್ಡಿ ಎನ್ನುವವರು ತಮ್ಮ ಆರು ಎಕರೆ ಹೊಲದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಬೆಳೆ ಚೆನ್ನಾಗಿಯೇ ಬಂದಿದೆ. ಇದಕ್ಕಾಗಿ ಬರೋಬ್ಬರಿ ₹3-4 ಲಕ್ಷ ವೆಚ್ಚ ಮಾಡಿದ್ದಾರೆ. ಕಟಾವು ಮಾಡಿದರೆ ಸಾವಿರ ಮೂಟೆಯಾಗುತ್ತದೆ. ಆದರೆ, ಅತಿಯಾದ ಮಳೆಯಿಂದ ಅಲ್ವಸ್ವಲ್ಪ ಕೆಟ್ಟಿದೆ. ಉಳಿದಿದ್ದನ್ನು ಈಗ ಕಟಾವು ಮಾಡಿ, ಮಾರೋಣ ಎಂದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಕೇಳುವವರೇ ಇಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಕಟಾವು ಮಾಡಿದ ಖರ್ಚು ಸಹ ಬರುವುದಿಲ್ಲ ಎಂದು ಬೆಳೆದಿದ್ದ ಆರು ಎಕರೆ ಈರುಳ್ಳಿ ಟ್ರ್ಯಾಕ್ಟರ್‌ನಿಂದ ಹರಗಿದ್ದಾರೆ.

ಇದು, ಕೇವಲ ಇವರೊಬ್ಬರ ಕತೆಯಲ್ಲ, ಜಿಲ್ಲಾದ್ಯಂತ ರೈತರು ಈಗ ಈರುಳ್ಳಿ ಕಟಾವು ಮಾಡಿದರೆ ಖರ್ಚು ಮೈಮೇಲೆ ಬರುತ್ತದೆ ಎಂದು ಹೊಲದಲ್ಲಿಯೇ ಗೊಬ್ಬರವಾದರೂ ಆಗುತ್ತದೆ ಎಂದು ಹರಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.

ಜಿಲ್ಲಾದ್ಯಂತ ಈ ವರ್ಷ 5 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈರುಳ್ಳಿ ಹಾಕಿದ್ದು, ಬಹುತೇಕ ರೈತರು ಕಟಾವು ಮಾಡದೆ ಈ ರೀತಿ ಹರಗುತ್ತಿದ್ದಾರೆ. ಕಟಾವು ಮಾಡಿದವರ ಪಾಡಂತು ಹೇಳತೀರದು. ಕಟಾವು ಮಾಡಿದ ಖರ್ಚು ಬಂದಿಲ್ಲ.

ರಫ್ತು ಮನವಿ:

ವಿಶ್ವದಾದ್ಯಂತ ಭಾರತದ ಈರುಳ್ಳಿಗೆ ಭಾರಿ ಬೇಡಿಕೆ ಇದ್ದರೂ ಸಹ ರಪ್ತಿಗೆ ಅವಕಾಶ ನೀಡದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ತುರ್ತಾಗಿ ರಫ್ತು ಪ್ರಾರಂಭಿಸಿದರೆ ಈರುಳ್ಳಿಯ ದರ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತದೆ. ಆದರೂ ಸಹ ಯಾಕೆ ರಫ್ತು ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಕಿದ ಈರುಳ್ಳಿ ಬೆಳೆ ಚೆನ್ನಾಗಿ ಬಂದರೂ ಮಾರುಕಟ್ಟೆಯಲ್ಲಿ ದರ ಪಾತಳಕ್ಕೆ ಕುಸಿದಿರುವುದರಿಂದ ಈರುಳ್ಳಿಯನ್ನು ಕಟಾವು ಮಾಡದೆ ಹರಗುತ್ತಿದ್ದೇವೆ. ನಾವೇ ಬೆಳೆದಿದ್ದನ್ನು ನಾವು ಹರಗಬೇಕಾದ ಪರಿಸ್ಥಿತಿ ಬಂದಿದ್ದನ್ನು ನೋಡಿ ನೋವಾಗುತ್ತದೆ ಎಂದು ಡೊಂಬರಳ್ಳಿ ಗ್ರಾಮದ ರೈತ ಬಸವರಡ್ಡಿ ಕರಡ್ಡಿ ತಿಳಿಸಿದ್ದಾರೆ.