ಕನ್ನಡಪ್ರಭ ವಾರ್ತೆ ಬೆಳಗಾವಿಕೇಂದ್ರ ಸರ್ಕಾರವು ಸಕ್ಕರೆ ದರ ನಿಗದಿ ಮಾಡುವ ಆಧಾರ ಮೇಲೆ ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ಮಾಡುವ ಆಧಾರದ ಮೇಲಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರೆ. 2026-27ನೇ ಹಂಗಾಮಿನ ಕಬ್ಬು ನುರಿಸುವ ದರ ನಿಗದಿ ವಿಚಾರವಾಗಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3600 ನೀಡಲು ಒಪ್ಪಲಾಗಿದ್ದು, ಈ ಪೈಕಿ ₹3500 ಮುಂಗಡ ದರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಸರ್ಕಾರವು ಸಕ್ಕರೆ ದರ ನಿಗದಿ ಮಾಡುವ ಆಧಾರ ಮೇಲೆ ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ಮಾಡುವ ಆಧಾರದ ಮೇಲಿಂದ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದಾರೆ. 2026-27ನೇ ಹಂಗಾಮಿನ ಕಬ್ಬು ನುರಿಸುವ ದರ ನಿಗದಿ ವಿಚಾರವಾಗಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ನಡೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3600 ನೀಡಲು ಒಪ್ಪಲಾಗಿದ್ದು, ಈ ಪೈಕಿ ₹3500 ಮುಂಗಡ ದರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಪ್ರಭಾರಿ ಜಿಲ್ಲಾಧಿಕಾರಿ ರಾಹುಲ್ ಶಿಂಧೆ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಹಿಂದಿನ ಹಂಗಾಮಿಗಿಂತ ಈ ಬಾರಿ ಪ್ರತಿ ಟನ್‌ಗೆ ₹350 ಹೆಚ್ಚುವರಿ ಪಾವತಿಸಲು ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ.

ಒಪ್ಪಂದದ ಪ್ರಕಾರ, ಮೊದಲ ಕಂತಿನಲ್ಲಿ ಪ್ರತಿ ಟನ್‌ಗೆ ₹3500 ಪಾವತಿಸಲಾಗುತ್ತದೆ. ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ಪ್ರತಿ ಟನ್‌ಗೆ ₹100 ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಲ್ಲದೆ, ಹೊಸ ಹಂಗಾಮು ಆರಂಭವಾಗುವ ಮೊದಲು ಪ್ರತಿ ಕೆ.ಜಿ. ಸಕ್ಕರೆಯ ಸರಾಸರಿ ಮಾರುಕಟ್ಟೆ ದರ ₹45 ಮೀರಿದರೆ, ಅದರ ಆಧಾರದ ಮೇಲೆ ಅಂತಿಮ ಕಂತಿನ ಹಣ ಪಾವತಿಸಲಾಗುತ್ತದೆ.

ಸಕ್ಕರೆ ದರ ಎಷ್ಟಿದ್ದರೆ ಟನ್‌ಗೆ ದರ ಹೇಗಿರುತ್ತದೆ?:

ಸಕ್ಕರೆಯ ಸರಾಸರಿ ದರ ₹48 ಇದ್ದರೆ ಪ್ರತಿ ಟನ್ ಕಬ್ಬಿಗೆ ₹3650, ₹49 ಇದ್ದರೆ ₹3750, ₹50 ಇದ್ದರೆ ₹3850 ಹಾಗೂ ₹55 ಇದ್ದರೆ ₹4350 ದರ ನಿಗದಿಪಡಿಸುವ ಲೆಕ್ಕಾಚಾರವನ್ನು ಒಪ್ಪಂದದಲ್ಲಿ ನಮೂದಿಸಲಾಗಿದೆ. ಈಗಾಗಲೇ ಪಾವತಿಸಿದ ₹3600 ಕಡಿತಗೊಳಿಸಿ ಉಳಿದ ಹೆಚ್ಚುವರಿ ಮೊತ್ತದಲ್ಲಿ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆಯಾಗಲಿದೆ. ತೀವ್ರ ನೀರಿನ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕಬ್ಬು ಬೆಳೆ ಹಾನಿಯಾಗುವುದನ್ನು ತಪ್ಪಿಸಲು ತಕ್ಷಣವೇ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕೆಂದು ರೈತ ಮುಖಂಡರು ಮತ್ತು ಕಾರ್ಖಾನೆಗಳ ಮಾಲೀಕರು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ.