ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಬೆಲೆ ಏರಿಕೆಯೇ ೬ನೇ ಗ್ಯಾರಂಟಿಯಾಗಿದ್ದು ಇದೊಂದನ್ನು ಮಾತ್ರ ಸರಿಯಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ವ್ಯಂಗ್ಯವಾಡಿದರು.ರಾಜ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಹಿಂದೂ ವಿರೋಧಿ, ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ ನೀತಿ ಮತ್ತು ಮುಸ್ಲಿಂ ಮೀಸಲಾತಿ ವಿರುದ್ಧ ತಾಲೂಕು ಬಿಜೆಪಿ ವತಿಯಿಂದ ತಾಲೂಕು ಆಡಳಿತ ಸೌಧದ ಮುಂದೆ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಭರವಸೆಗಳನ್ನು ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಯಾವುದೇ ಕೆಲಸವನ್ನು ಮಾಡಲಿಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸರಿಯಾಗಿ ಅನುಷ್ಠಾನಗೊಳ್ಳಲಿಲ್ಲ. ಬದಲಿಗೆ ಎಸ್‌ಸಿ, ಎಸ್‌ಟಿಗಳ ಕಲ್ಯಾಣಕ್ಕೆ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕೂಡ ಹಿಂಪಡೆಯಿತು ಎಂದು ಆಪಾದಿಸಿದರು.
ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿದವರನ್ನು ಹಿಡಿದು ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಹೇಳಿದ್ದ ಸರಕಾರ ಇದುವರೆಗೂ ಯಾರನ್ನೂ ಬಂಧಿಸಿಲ್ಲ. ವಾಲ್ಮೀಕಿ ನಿಗಮದ ಹಗರಣದ ತನಿಖೆ ಸರಿಯಾಗಿ ಆಗಿದ್ದರೆ ಹಲವಾರು ಶಾಸಕರ ಹೆಸರು ಬಹಿರಂಗವಾಗುತ್ತಿತ್ತು. ಈಗಿನ ಸರಕಾರದಲ್ಲಿ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದ್ದು ನಮಗೆಲ್ಲಾ ಒಂದು ಕಾನೂನಿದ್ದರೆ ಅಲ್ಪಸಂಖ್ಯಾತರಿಗೇ ಒಂದು ಕಾನೂನು ಆಗಿದೆ ಎಂದು ತಿಳಿಸಿದರು. ಬಿಜೆಪಿ ಸರಕಾರ ಇದ್ದಾಗ ನಾನು ಸಚಿವನಾಗಿದ್ದ ಅವಧಿಯಲ್ಲಿ ತಿಪಟೂರು ತಾಲೂಕಿನ ಅಭಿವೃದ್ಧಿಗೆ ೮ ಕೋಟಿ ರು.ಗಳು ಮಂಜೂರಾಗಿತ್ತು. ಆ ಯೋಜನೆಗಳ ಟೆಂಡರ್ ಪ್ರಕ್ರಿಯೆಗಳೂ ಮುಗಿದಿತ್ತು. ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಟೆಂಡರ್ ಆಗಿದ್ದ ಅಭಿವೃದ್ಧಿ ಕೆಲಸಗಳೂ ಪ್ರಾರಂಭವಾಗದೇ ನಿಂತಿದೆ. ಇದಕ್ಕೆ ಕಾರಣವನ್ನು ಶಾಸಕರೇ ತಿಳಿಸಬೇಕಿದೆ ಎಂದು ಮಾಜಿ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ ಚುನಾವಣೆ ಪೂರ್ವದಲ್ಲಿ ಅಹಿಂದ ಸಮಾಜವನ್ನು ಉದ್ದಾರ ಮಾಡುತ್ತೇನೆಂದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದುಳಿದ ಸಮಾಜವನ್ನು ನಿರ್ನಾಮ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸುತ್ತಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಎರಡು ವರ್ಷದ ಬಜೆಟ್‌ನಲ್ಲಿ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ೨೫ಸಾವಿರ ಕೋಟಿ ರುಗಳನ್ನು ಹಿಂಪಡೆದ ದೃಷ್ಟ ಸರಕಾರ ಇದಾಗಿದ್ದು, ಪರಿಶಿಷ್ಠರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ೧೮೭ಕೋಟಿ ಹಣವನ್ನು ತೆಲಂಗಾಣದ ಚುನಾವಣೆಗೆ ಬಳಸಿಕೊಂಡಿತು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅನೇಕ ಹಿಂದುಗಳು ಕೊಲೆಯಾಗುತ್ತಿದ್ದಾರೆ. ಇಂದು ಸರಕಾರದ ವಿರುದ್ದ ಪ್ರತಿಭಟಿಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸುತ್ತಿದ್ದೇವೆ ಎಂದರು.
ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಯರಹಳ್ಳಿ ಶಂಕರಪ್ಪ, ಜಿಲ್ಲಾ ಉಪಾಧ್ಯಕ್ಷ ಹರಿಸಮುದ್ರ ಗಂಗಾಧರ್, ಬಿಸಲೇಹಳ್ಳಿ ಜಗದೀಶ್, ನಗರಸಭಾ ಸದಸ್ಯರಾದ ಸಂಗಮೇಶ್, ಜಯಲಕ್ಷ್ಮಿ, ಪದ್ಮ ತಿಮ್ಮೇಗೌಡ, ಮಾಜಿ ಸದಸ್ಯರಾದ ಪ್ರಸನ್ನಕುಮಾರ್, ಸಿಂಗ್ರಿದತ್ತ ಪ್ರಸಾದ ಇನ್ನಿತರ ಮುಖಂಡರು ಇದ್ದರು.