ಸಾರಾಂಶ
ಯಲ್ಲಾಪುರ: ಯಾವುದೇ ಕಾರ್ಯ ಮಾಡುವಾಗ ಸಂಕಲ್ಪ ಶಕ್ತಿ ಬೇಕು. ಇಷ್ಟೊಂದು ಸುದೀರ್ಘ ವರ್ಷಗಳ ಕಾಲ ಜಿಲ್ಲೆಯಲ್ಲಿ ಈ ಉತ್ಸವದ ಬಗ್ಗೆ ಇರುವ ಹಿರಿಮೆ ಬೆಳೆಯಲು ಅದ್ಭುತವಾದ ಸಂಘಟನೆಯೇ ಕಾರಣವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ನ. ೪ರಂದು ಸಂಕಲ್ಪ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಸಂಘಟಿತ ಕಾರ್ಯದಲ್ಲಿ ಅಭಿಪ್ರಾಯ ಭೇದ ಸಹಜ. ಎಲ್ಲಿ ಸ್ವಾರ್ಥರಹಿತ ಕಾರ್ಯಗಳು ನಡೆಯುತ್ತವೆಯೋ, ಅಲ್ಲಿ ಭಿನ್ನಾಭಿಪ್ರಾಯ ಬೆಳೆಯದು. ಆದ್ದರಿಂದಲೇ ಇದು ಜಿಲ್ಲೆಯ ಹೆಮ್ಮೆಯ ಉತ್ಸವವಾಗಿದೆ. ಇಲ್ಲಿ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳ ಜತೆಗೆ ಯಕ್ಷಗಾನ, ಸಂಗೀತ, ಸಾಹಿತ್ಯ, ಕಲೆ ಮತ್ತು ಕಲಾವಿದರಿಗೆ ವೇದಿಕೆಯ ಅವಕಾಶ ಇವೆಲ್ಲವುಗಳ ಜತೆ ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.ಒಂದು ಆದರ್ಶಪ್ರಾಯ ಸಂಘಟನೆಯನ್ನು ಪ್ರಮೋದ ಹೆಗಡೆ ಬೆಳೆಸಿದ್ದಾರೆ. ಎಲ್ಲಿ ಮಾತೃಭಾಷೆ, ಜ್ಞಾನ, ಸಂಸ್ಕಾರದಿಂದ ಸಂಸ್ಕೃತಿ ಭಾವನಾತ್ಮಕವಾದ ಸಂಬಂಧ ಬೆಸೆಯುತ್ತದೆಯೋ, ಅಲ್ಲಿ ಇಂತಹ ಶ್ರೇಷ್ಠ ಕಾರ್ಯಕ್ರಮಗಳು ನಡೆಯುವುದಕ್ಕೆ ಸಾಧ್ಯ. ಮಂಚೀಕೇರಿ ಕೂಡಾ ಹೆಗ್ಗೋಡಿನ ಹಾಗೆಯೇ ನಾಟಕ ಕ್ಷೇತ್ರದಲ್ಲಿ ಅಷ್ಟೇ ಉತ್ತಮ ಹೆಸರು ಮಾಡಿದೆ. ಆಧುನಿಕತೆಯ ಭರಾಟೆಯಲ್ಲಿ ಕಳೆದುಹೋಗುತ್ತಿರುವ ನಾವು ಹಣವೇ ಸರ್ವಸ್ವವೆಂಬ ಭ್ರಮೆಯಲ್ಲಿ ಸಾಗಿದ್ದೇವೆ. ಅದು ನಮ್ಮ ನಿಜವಾದ ಬದುಕಿಗೆ ಮೌಲ್ಯ ನೀಡದು. ಸುಸಂಸ್ಕೃತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಇಂತಹ ಉತ್ಸವಗಳು ಪರಿಣಾಮಕಾರಿಯಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಪ್ರಾಚೀನವಾದ ಗ್ರೀಸ್ ಸಂಸ್ಕೃತಿಯೇ ನಾಶವಾಗಿದೆ. ಅನೇಕ ರಾಜ, ಮಹಾರಾಜರ ವಂಶವೇ ಇಲ್ಲವಾಗಿದೆ. ಅವರೆಲ್ಲ ಸಂಪತ್ತು ಕೂಡಾ ನಮ್ಮ ಮುಂದಿಲ್ಲ. ಆದರೆ ಇಂದಿಗೂ ನಮ್ಮ ಜ್ಞಾನ ಮತ್ತು ಸಂಸ್ಕೃತಿ ಮಾತ್ರ ಎಂದೂ ನಾಶವಾಗಲಾರದು. ಆ ದೃಷ್ಟಿಯಿಂದ ನಮ್ಮ ಸಂಸ್ಕೃತಿಯ ಮೂಲ ಬೇರಾದ ಯಕ್ಷಗಾನ, ಕಲೆ, ಪರಂಪರೆಯ ಮೌಲ್ಯ ಉಳಿಸಿಕೊಂಡು ಹೋದಾಗ ಮಾತ್ರ ಭವಿಷ್ಯತ್ತಿನಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.ಹಿರಿಯ ಸಹಕಾರಿ ಗಜಾನನ ಗಾಂವ್ಕರ ಮಲವಳ್ಳಿ, ಶಿಕ್ಷಕ ಚಂದ್ರಶೇಖರ ನಾಯ್ಕ ಸಂಕಲ್ಪ ಪ್ರಶಸ್ತಿಗೆ ಭಾಜನರಾಗಿ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಪಡೆದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಟಿ. ಪಾಟೀಲ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಲ್. ಭಟ್ಟ, ತಾಲೂಕಾಧ್ಯಕ್ಷ ಗಜಾನನ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಅನಂತಮೂರ್ತಿ ಹೆಗಡೆ ಶಿರಸಿ, ಎಸ್.ಜಿ. ಹೆಗಡೆ ಬೆದೆಹಕ್ಕಲು, ಶಿವಲಿಂಗಯ್ಯ ಅಲ್ಲಯ್ಯನಮಠ, ರಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಕು. ಯುಕ್ತಾ ಭಾಗ್ವತ ಪ್ರಾರ್ಥಿಸಿದರು. ಸಂಕಲ್ಪ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರಾಘವೇಂದ್ರ ಹೊನ್ನಾವರ ನಿರ್ವಹಿಸಿದರು. ಬಾಬು ಬಾಂದೇಕರ ವಂದಿಸಿದರು.