ಮುಜರಾಯಿ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿರುವ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಯಾವುದೇ ಪ್ರಮುಖ ಖಾತೆ ನೀಡಿದರೂ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘ ಎಚ್ಚರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಜರಾಯಿ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿರುವ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಯಾವುದೇ ಪ್ರಮುಖ ಖಾತೆ ನೀಡಿದರೂ ಹೆಚ್ಚುವರಿಯಾಗಿ ಮುಜರಾಯಿ ಖಾತೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘ ಎಚ್ಚರಿಸಿದೆ.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀವತ್ಸ, ಮುಜರಾಯಿ ಇಲಾಖೆಯನ್ನು ರಾಮಲಿಂಗಾರೆಡ್ಡಿ ಅವರು ವಹಿಸಿಕೊಂಡ ನಂತರ 1948ರಿಂದ ಕಡತದಲ್ಲೇ ಉಳಿದಿದ್ದ ಹಲವು ಅಭಿವೃದ್ಧಿ ಕೆಲಸಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲದೆ, ಬಡ ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಎ, ಬಿ, ಸಿ ವರ್ಗದ ದೇವಾಲಯಗಳ ಅರ್ಚಕರಿಗೆ ಸಂಬಳ ಸೇರಿ ಹಲವು ಸೌಕರ್ಯಗಳನ್ನು ಕೊಡಿಸಿದ್ದಾರೆ ಎಂದರು.

ಇದಲ್ಲದೆ, ಮುಜರಾಯಿ ದೇವಾಲಯಗಳಿಗೆ ಸೇರಬೇಕಾದ 45 ಸಾವಿರ ಹೆಕ್ಟೇರ್ ಭೂಮಿಯಲ್ಲಿ 18 ಸಾವಿರ ಹೆಕ್ಟೇರ್ ಭೂಮಿಯನ್ನು ದೇವಾಲಯದ ಹೆಸರಿಗೆ ಪಹಣಿ, ಖಾತೆ ಮಾಡಿಸಿ ಇಂಡೀಕರಣ ಮಾಡಿಸುವಲ್ಲಿ ಸಚಿವ ರಾಮಲಿಂಗಾರೆಡ್ಡಿ ಸಫಲರಾಗಿದ್ದಾರೆ. ಇದಲ್ಲದೆ, ಕಾಶಿ ಯಾತ್ರೆಗೆ ಅರ್ಚಕರನ್ನು ಕರೆದೊಯ್ಯುವ ಕಾರ್ಯಕ್ರಮ, ಅಕಾಲಿಕ ಮರಣ ಹೊಂದಿದ ಅರ್ಚಕರ ಕುಟುಂಬಕ್ಕೆ 2 ಲಕ್ಷ ಸಹಾಯಧನ, ಅರ್ಚಕರ ಮಕ್ಕಳಿಗೆ ಆಯಾ ತಾಲೂಕು ಕಚೇರಿಯಲ್ಲೇ ನೇಮಕ ಮಾಡುವ ನಿಯಮ ಜಾರಿಗೆ ತಂದಿದ್ದಾರೆ. ಇದಲ್ಲದೆ, ಇವರಿಗೆ ಮುಜರಾಯಿ ಖಾತೆ ನೀಡಿದರೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಆಗ್ರಹಿಸಿದರು.

ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ ದೀಕ್ಷಿತ್, ಡಾ। ಎಚ್.ಎಸ್.ಗುರುದೀಕ್ಷಿತ್, ಡಾ। ಬಿ.ಕೆ.ರಾಮಚಂದ್ರ, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಪ್ರದೀಪ್, ರುದ್ರೇಶ್, ನರಸಿಂಹಮೂರ್ತಿ, ಮಹಾರುದ್ರೇಶ್, ರಾಮಯ್ಯ ಇದ್ದರು.ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ ದೀಕ್ಷಿತ್ ಮಾತನಾಡಿ, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಖಾತೆ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಸಂಘ, ಆಗಮಿಕರ ಸಂಘದಿಂದ 45 ಸಾವಿರ ಸದಸ್ಯರೂ ಸೇರಿ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ರಾಮಲಿಂಗಾರೆಡ್ಡಿಯವರಿಗೆ ಅಭಿನಂದನಾ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.

ಒಂದು ವೇಳೆ ರೆಡ್ಡಿಯವರಿಗೆ ಮುಜರಾಯಿ ಖಾತೆ ನೀಡದಿದ್ದರೆ ಅಭಿನಂದನಾ ಸಮಾವೇಶವನ್ನು ಹೋರಾಟದ ಸಮಾವೇಶವಾಗಿ ಪರಿವರ್ತಿಸಲಾಗುವುದು ಎಂದರು.