ಎರಡು ದಿನಗಳಿಂದ ಶ್ರವಣಬೆಳಗೊಳದ ಭಂಡಾರಿ ಬಸದಿಯ ಆವರಣದಲ್ಲಿ ನಡೆಯುತ್ತಿರುವ ೫ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು. ಪುರದ ಹಿತವನ್ನು ಬಯಸುವವರು, ಶ್ರಾವಕ-ಶ್ರಾವಕಿಯರಿಗೆ, ಸಮಾಜಕ್ಕೆ ಮಾರ್ಗದರ್ಶಕರು. ಎಲ್ಲ ಜೀವಿಗಳ ಕಷ್ಟಕ್ಕೆ ಪರಿಹಾರ ಒದಗಿಸುವವರಾಗಿದ್ದಾರೆ. ಪೌರೋಹಿತ್ಯ ಎನ್ನುವುದು ಕೇವಲ ಒಂದು ವೃತ್ತಿಯಲ್ಲ. ಸಮಾಜದ ಹಿತವನ್ನು ಬಯಸುವ ಶ್ರೇಷ್ಠವಾದ ಸ್ಥಾನ. ಅವರಿಗೆ ಸಹಕಾರ ನೀಡುವುದು ಶ್ರಾವಕರ ಜವಾಬ್ದಾರಿಯಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವಿದ್ವಾಂಸರು, ಅರ್ಚಕರು, ಪುರೋಹಿತರು ಸರ್ವತ್ರ ಪೂಜಿತರಾಗಿರುತ್ತಾರೆ. ಪುರೋಹಿತರಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಸ್ಥಾನ ನೀಡಲಾಗುತ್ತದೆ. ನಮ್ಮ ಪುರಾತನ ದೇವಾಲಯಗಳು, ಸಂಸ್ಕೃತಿ, ಪರಂಪರೆಯನ್ನು ರಕ್ಷಣೆ ಮಾಡುವಲ್ಲಿ ಪುರೋಹಿತರ ಪಾತ್ರ ಬಹಳ ಮುಖ್ಯವಾಗಿದ್ದು, ಅವರಿಗೆ ಸಹಕಾರ ನೀಡುವುದು ಶ್ರಾವಕರ ಜವಾಬ್ದಾರಿಯಾಗಿದೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಮಹಾಸ್ವಾಮೀಜಿ ಹೇಳಿದರು.ಎರಡು ದಿನಗಳಿಂದ ಶ್ರವಣಬೆಳಗೊಳದ ಭಂಡಾರಿ ಬಸದಿಯ ಆವರಣದಲ್ಲಿ ನಡೆಯುತ್ತಿರುವ ೫ನೇ ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾವನ ಸಾನಿಧ್ಯ ವಹಿಸಿ ಮಾತನಾಡಿದರು. ಪುರದ ಹಿತವನ್ನು ಬಯಸುವವರು, ಶ್ರಾವಕ-ಶ್ರಾವಕಿಯರಿಗೆ, ಸಮಾಜಕ್ಕೆ ಮಾರ್ಗದರ್ಶಕರು. ಎಲ್ಲ ಜೀವಿಗಳ ಕಷ್ಟಕ್ಕೆ ಪರಿಹಾರ ಒದಗಿಸುವವರಾಗಿದ್ದಾರೆ. ಪೌರೋಹಿತ್ಯ ಎನ್ನುವುದು ಕೇವಲ ಒಂದು ವೃತ್ತಿಯಲ್ಲ. ಸಮಾಜದ ಹಿತವನ್ನು ಬಯಸುವ ಶ್ರೇಷ್ಠವಾದ ಸ್ಥಾನ. ಶ್ರವಣಬೆಳಗೊಳ ತ್ಯಾಗದ ಭೂಮಿಯಾಗಿದ್ದು, ಇಲ್ಲಿ ಹಿಂದಿನಿಂದಲೂ ಶಾಸ್ತ್ರಿ ಪರಂಪರೆ ಭವ್ಯವಾಗಿತ್ತು. ಅಂದಿನಿಂದಲೂ ಶಾಸ್ತ್ರಿಗಳಿಗೆ, ವಿದ್ವಾಂಸರಿಗೆ ಗೌರವ ಸತ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಶ್ರವಣಬೆಳಗೊಳ ಜೈನ ಧರ್ಮಿಯರ ಕೇಂದ್ರಬಿಂದುವಾಗಿತ್ತು. ಎಲ್ಲ ಶಾಸ್ತ್ರಿಗಳಿಗೆ, ವಿದ್ವಾಂಸರಿಗೆ ಜ್ಞಾನದ ಕೆಂದ್ರಸ್ಥಾನವಾಗಿತ್ತು. ನಮ್ಮ ಹಿಂದಿನ ಗುರುಗಳಾದ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರು ವಿದ್ವಾಂಸರಿಗೆ, ಪುರೋಹಿತರಿಗೆ ಮಹತ್ವದ ಸ್ಥಾನಮಾನ ನೀಡಿ, ಪ್ರೋತ್ಸಾಹ ನೀಡುತ್ತಿದ್ದರು. ಪುರೋಹಿತರು ಬೇಡುವಂತವರಾಗಬಾರದು. ದಾನ ನೀಡುವಂತಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸುಭದ್ರರಾಗಬೇಕು. ಎಲ್ಲರೂ ಸಂಘಟಿತರಾಗಿ ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಬೇಕು. ನಮಗಿರುವ ಅವಕಾಶಗಳನ್ನು ಬಳಸಿಕೊಂಡು ಉನ್ನತಮಟ್ಟಕ್ಕೆ ಏರಬೇಕು. ನಮ್ಮಲ್ಲಿ ಕಲಿಯುವ ಹಂಬಲ ಇರಬೇಕು. ಆಗ ಮಾತ್ರ ಹೆಚ್ಚು ಜ್ಞಾನಿಗಳಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ವಸ್ತ್ರ ಸಂಹಿತೆ ರೂಢಿಸಿಕೊಳ್ಳಬೇಕು. ಧಾರ್ಮಿಕವಾಗಿ ಜ್ಞಾನವನ್ನು ವೃದ್ಧಿಸಿಕೊಂಡಾಗ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯುತ್ತದೆ. ಪುರೋಹಿತರು ಸಮಾಜದ ಆಸ್ತಿ ಇದ್ದಂತೆ. ಪತಿನಿತ್ಯ ಸಮಾಜಕ್ಕೆ ಮಾರ್ಗದರ್ಶನ ನೀಡಿ ಧರ್ಮ ಜಾಗೃತಿ ಮೂಡಿಸಬೇಕು. ನಮ್ಮ ನಡೆ-ನುಡಿಗಳು ಸಮಾಜಕ್ಕೆ ಆದರ್ಶಪ್ರಾಯವಾಗಿರಬೇಕು. ಸಾಮೂಹಿಕ ಕಾರ್ಯಕ್ರಮಗಳಲ್ಲಿ ಕಂದಮೂಲ ಆಹಾರಗಳನ್ನು ತ್ಯಜಿಸುವಂತೆ ಶ್ರಾವಕರಿಗೆ ಅರಿವು ಮೂಡಿಸಬೇಕು.ಪುರೋಹಿತರ ಮುಖ್ಯ ಸಮಸ್ಯೆಯೆಂದರೆ ನಮಗೆ ಗೌರವ ಸಿಗುತ್ತಿಲ್ಲ ಎಂಬುದು. ದೇವತಾ ಪೂಜೆಯನ್ನು ಯಾವುದೇ ಅಪೇಕ್ಷೆಯಿಲ್ಲದಂತೆ ಮಾಡಬೇಕು. ಆಗ ಮಾತ್ರ ಪುರೋಹಿತರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಪೂಜೆ, ಅಭಿಷೇಕ ಸಂದರ್ಭಗಳಲ್ಲಿ ಆಸೆ, ಲೋಭ, ಮೋಹವನ್ನು ಬಿಡಬೇಕು. ದ್ರವ್ಯಗಳ ಮೇಲಿನ ಮೋಹವನ್ನು ತ್ಯಜಿಸಿದರೆ ಸಮಾಜದಲ್ಲಿ ಉನ್ನತ ಗೌರವ ಲಭಿಸುತ್ತದೆ ಎಂದು ಹೇಳಿದರು.ಪುರದ ಹಿತವನ್ನು ಬಯಸುವ ಪುರೋಹಿತರಿಗೆ ನೋವನ್ನು ಕೊಟ್ಟರೆ ಶ್ರೇಯಸ್ಕರ ಆಗುವುದಿಲ್ಲ. ಅನಾದಿಕಾಲದಿಂದಲೂ ಜಿನಾಲಯಗಳನ್ನು ಸಂರಕ್ಷಣೆ ಮಾಡಿದ ಪುರೋಹಿತರನ್ನು ಮರೆಯಬಾರದು. ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನವನ್ನು ಕೊಡಲು ಹೋಗುವಾಗ ಊರಿನ ಪ್ರಥಮ ಶ್ರಾವಕರಾದ ಪುರೋಹಿತರಿಗೆ ಮೊದಲ ಪ್ರಾಶಸ್ತ್ಯ ನೀಡಿ ಅವರ ನೇತೃತ್ವದಲ್ಲಿ ಹೋಗಬೇಕು. ಪುರೋಹಿತರು ಹಾಲು ಮತ್ತು ಅಕ್ಷತೆಗಾಗಿ ಮನೆ ಮನೆಗೆ ಹೋಗುವುದು ನಿಲ್ಲಬೇಕು. ಶ್ರವಕರೇ ಬಸದಿಗಳಿಗೆ ಹಾಲು, ಅಕ್ಷತೆಯನ್ನು ತಲುಪಿಸಬೇಕು ಎಂದು ಸೂಚನೆ ನೀಡಿದರು.
ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಚಂದ್ರಗಿರಿ ಮಹೋತ್ಸವ ಜರುಗಲಿದ್ದು, ಇದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ೫ ದಿನಗಳು ನೆರವೇರಲಿದೆ. ಆ ಸಂದರ್ಭದಲ್ಲಿ ಪುರೋಹಿತರ ಸಮ್ಮೇಳನ ನಡೆಸಲು ಯೋಜನೆ ರೂಪಿಸಲಾಗಿದೆ. ಆಗ ದೇಶದ ಎಲ್ಲ ಪುರೋಹಿತರನ್ನು ಆಹ್ವಾನಿಸಲಾಗುತ್ತದೆ. ಎಲ್ಲರೂ ಆ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಪಾದೂರ ಸುದರ್ಶನಕುಮಾರ ಇಂದ್ರ, ದಕ್ಷಿಣ ಭಾರತ ದಿಗಂಬರ ಜೈನ ಅರ್ಚಕರ ಸಂಘದ ಅಧ್ಯಕ್ಷ ಪ್ರತಿಷ್ಠಾಚಾರ್ಯ ಎಸ್. ಎಂ. ಸನ್ಮತಿ ಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ಎಚ್.ಪಿ.ಮೋಹನ್ ಕುಮಾರ್ ಶಾಸ್ತ್ರಿ, ಕಾರ್ಯಾಧ್ಯಕ್ಷ ತವನಪ್ಪ ಪಂಡಿತ, ಸಾಂಗ್ಲಿಯ ದೀಪಕ್‌ಕುಮಾರ ಬಾಳೋಸೋ ಉಪಾಧ್ಯೆ, ಪಂಡಿತ್ ಅಶೋಕ್ ಇಂದ್ರ, ಧರಣೇಂದ್ರ ಮಂಜಯ್ಯ ಇಂದ್ರ ಪಂಡಿತ, ಹರ್ಷ ನಾಗರಾಜ್ ಮುಂತಾದವರಿದ್ದರು.