ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಬಹಳ ಮುಖ್ಯ. ವೈದ್ಯರ ಪ್ರಕಾರ ಮಕ್ಕಳ ಮೊದಲ ಮೂರು ವರ್ಷ ಗೋಲ್ಡನ್ ಡೇಸ್ ಎನ್ನುತ್ತಾರೆ. ಆದರೆ ಆ ಮೂರು ವರ್ಷದಲ್ಲೇ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದಿಲ್ಲ. ನಮ್ಮಲ್ಲಿ ಪ್ರಾಥಮಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಮೂಲಕ ಅಧೋಗತಿಗೆ ತರಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮಕ್ಕಳಿಗೆ ವೈಜ್ಞಾನಿಕವಾಗಿ ಪ್ರಾಥಮಿಕ ಶಿಕ್ಷಣ ದೊರಕಿದರೆ ಭವಿಷ್ಯದಲ್ಲಿ ಒಳ್ಳೆಯ ವಿದ್ಯಾವಂತರಾಗಲು ಸಾಧ್ಯ ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಹೇಳಿದರು.ನಗರದ ಎಂಜಿನಿಯರ್ ಗಳ ಸಂಸ್ಥೆಯಲ್ಲಿ ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಪದ್ಮಪಾಣಿ ಲಲಿತಕಲಾ ಅಕಾಡೆಮಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಬಹಳ ಮುಖ್ಯ. ವೈದ್ಯರ ಪ್ರಕಾರ ಮಕ್ಕಳ ಮೊದಲ ಮೂರು ವರ್ಷ ಗೋಲ್ಡನ್ ಡೇಸ್ ಎನ್ನುತ್ತಾರೆ. ಆದರೆ ಆ ಮೂರು ವರ್ಷದಲ್ಲೇ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದಿಲ್ಲ. ನಮ್ಮಲ್ಲಿ ಪ್ರಾಥಮಿಕ ಶಿಕ್ಷಣವನ್ನು ದುರ್ಬಲಗೊಳಿಸುವ ಮೂಲಕ ಅಧೋಗತಿಗೆ ತರಲಾಗಿದೆ ಎಂದು ಆರೋಪಿಸಿದರು.ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋದಾಗ ಹೆಚ್ಚು ಆದ್ಯತೆ ಸಿಗುತ್ತದೆ. ಆರಂಭದಲ್ಲಿ ಸಿಗದ ಆದ್ಯತೆ, ಕಡೆಯಲ್ಲಿ ಸಿಗುತ್ತದೆ. ಇದೆಂಥ ಅವೈಜ್ಞಾನಿಕ ಶಿಕ್ಷಣ ಕ್ರಮ. ಮಕ್ಕಳಿಗೆ ಸರಿಯಾಗಿ ಓದಲು, ಬರೆಯಲು ಬರಲಿಲ್ಲ ಎಂದರೆ ಉನ್ನತ ಶಿಕ್ಷಣ ಕೊಟ್ಟರೆ ಏನು ಪ್ರಯೋಜನವಾಗುವುದಿಲ್ಲ. ಈಗಲೂ ಕೂಡ ಎಷ್ಟೋ ಕಾಲೇಜು ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು, ಬರೆಯಲು ಬರುವುದಿಲ್ಲ. ಶಿಕ್ಷಣ ಮಂತ್ರಿಗಳಿಗೆ ಪ್ರಾಥಮಿಕ ಶಿಕ್ಷಣ ಬಹಳ ದೊಡ್ಡ ಸಾವಾಲಾಗಿದೆ ಎಂದು ಅವರು ತಿಳಿಸಿದರು.
ಪ್ರಾಥಮಿಕ ಶಿಕ್ಷಣದಲ್ಲಿನ ಸವಾಲು ಉನ್ನತ ಶಿಕ್ಷಣ ಸಚಿವಾಲಯಕ್ಕೆ ಇಲ್ಲ. ಇದನ್ನು ಈ ಮಟ್ಟಕ್ಕೆ ತಂದವರಾರು? ಹೀಗಾಗಿ ಸರ್ಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಮುಚ್ಚುತ್ತಾ ಬರುತ್ತಿದೆ. 2015-16ನೇ ಸಾಲಿನಲ್ಲಿ 50,424 ಸರ್ಕಾರಿ ಶಾಲೆಗಳಿದ್ದವು. ಆದರೆ 2025-26ನೇ ಸಾಲಿಗೆ 43,554 ಶಾಲೆಗೆ ಬಂದು ನಿಂತಿದೆ ಎಂದು ಅವರು ಮಾಹಿತಿ ನೀಡಿದರು.ಬಿವಿಎಸ್ ರಾಜ್ಯ ಸಂಯೋಜಕ ಸೋಸಲೆ ಸಿದ್ದರಾಜು, ಹಿರಿಯ ಪತ್ರಕರ್ತ ಸಿ.ಕೆ. ಮಹೇಂದ್ರ, ನಿವೃತ್ತ ಪ್ರಾಧ್ಯಾಪಕಿ ಡಾ. ಲತಾ, ಎಐಡಿಎಸ್ಒ ರಾಜ್ಯ ಖಜಾಂಚಿ ಬಿ.ಜೆ. ಸುಭಾಷ್, ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜು ಇದ್ದರು.