ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಶಾಸಕ ಬಸವರಾಜ ಶಿವಣ್ಣನವರ ಪ್ರಯತ್ನಕ್ಕೆ ಗ್ರಾಮದ ಮುಖಂಡರು ಪಕ್ಷಾತೀತವಾಗಿ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ನಾಗರಾಜ ಆನ್ವೇರಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ತಮ್ಮ ಸ್ವಂತದ 2 ಎಕರೆಯಷ್ಟು ಜಾಗವನ್ನು ದಾನದ ರೂಪದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದ್ದಲ್ಲದೇ, ₹1 ಲಕ್ಷ ಠೇವಣಿ ಸಹ ಸರ್ಕಾರಕ್ಕೆ ನೀಡಿದ್ದರು. ಹೀಗಾಗಿ ಹಾಲಿ ಮತ್ತು ಮಾಜಿ ಶಾಸಕರ ಪ್ರಯತ್ನದಿಂದ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಐತಿಹಾಸಿಕ ನಿರ್ಣಯಕ್ಕೆ ಮಾದರಿಯಾಗಿದೆ ಎಂದರು.

ಆಸೆ ಕೈಗೂಡಿರಲಿಲ್ಲ: ಬಿಜೆಪಿ ಹಿರಿಯ ಮುಖಂಡ ಶಿವಬಸಣ್ಣ ಕುಳೇನೂರ ಮಾತನಾಡಿ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಅವಧಿಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಬೇಕಾಗಿತ್ತು. ಆದರೆ ಅವರ ಆಸೆ ಕೈಗೂಡಲಿಲ್ಲ. ಪ್ರಸ್ತುತ ಶಾಸಕ ಶಿವಣ್ಣನವರ ನಿರಂತರ ಪ್ರಯತ್ನದಿಂದ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಿದ್ದು, ಇದನ್ನು ಪಕ್ಷಾತೀತವಾಗಿ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದರು.

ಸುಮಾರು 15 ಸಾವಿರ ಜನರಿಗೆ ಅನುಕೂಲ: ಕಾಂಗ್ರೆಸ್ ಮುಖಂಡ ಶಿವಪುತ್ರಪ್ಪ ಅಗಡಿ ಮಾತನಾಡಿ, ಗ್ರಾಮದ ಜನಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದೆ, ಅಷ್ಟಕ್ಕೂ ಶಿಕ್ಷಣ ಇನ್ನಿತರ ಉದ್ದೇಶಗಳಿಗೆ ಗ್ರಾಮಕ್ಕೆ 5 ಸಾವಿರಕ್ಕೂ ಹೆಚ್ಚು ಜನರು ಬಂದು ಹೋಗುತ್ತಾರೆ. ಇನ್ನೂ ಕೃಷಿಕ ಕುಟುಂಬಗಳು ಹೆಚ್ಚಾಗಿದ್ದರೂ ಕೂಲಿ ಕಾರ್ಮಿಕರು ಬಡವರ ಮೇಲೆ ಅವಲಂಬಿತರಾಗಿದ್ದು, ಅವರೆಲ್ಲರ ಆರೋಗ್ಯದ ದೃಷ್ಟಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಿದ್ದು ಶಾಸಕರ ಪ್ರಯತ್ನವನ್ನು ಶ್ಲಾಘಿಸಿದರು.

ಪುಟ್ಟನಗೌಡ ಪಾಟೀಲ, ಶಿವಕುಮಾರ ಪಾಟೀಲ, ಮಂಜುನಾಥ ಬೆನಕನಕೊಂಡ, ನಿಂಗಪ್ಪ ಬಟ್ಟಲಕಟ್ಟಿ, ಮಂಜಪ್ಪ ಎಲಿ, ಸತೀಶ ಪಾಟೀಲ, ಮಾಲತೇಶ ಕುರಿ, ಸಂಜಯ ಹಿತ್ತಲಮನಿ ಇನ್ನಿತರಿದ್ದರು.ತುರ್ತು ಚಿಕಿತ್ಸಾ ಘಟಕ ಆರಂಭಿಸಿ: ಗ್ರಾಮಕ್ಕೆ ಹೊಂದಿಕೊಂಡು ರಾಷ್ಟ್ರೀಯ ಹೆದ್ದಾರಿಯಿದ್ದು, ಅಪಫಾತ ಸಂಭವಿಸಿದಲ್ಲಿ ಚಿಕಿತ್ಸೆಗಾಗಿ ಕನಿಷ್ಠ 15 ಕಿ.ಮೀ. ಸಂಚರಿಸಬೇಕಾಗುತ್ತದೆ. ಹೀಗಾಗಿ ಪ್ರಸ್ತುತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆ ನಿಗಾ ಘಟಕ, ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಿದಲ್ಲಿ ಜನರಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಬಿಜೆಪಿ ಮುಖಂಡ ವಿಜಯಭರತ ಬಳ್ಳಾರಿ ಹೇಳಿದರು.