ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಮೂಲದ, ಬೆಂಗಳೂರಿನ ಖ್ಯಾತ ಆರ್‌ಜೆ ಶ್ರದ್ದಾಜೈನ್ ಅವರಿಗೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ರಾಷ್ಟ್ರೀಯ ಕಂಟೆಂಟ್ ಅವಾರ್ಡ್ ಕಾರ್ಯಕ್ರಮದ ಮಹಿಳಾ ವಿಭಾಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶ್ರದ್ಧಾ ವೇದಿಕೆ ಏರುತ್ತಿದ್ದಂತೆ ಪ್ರಧಾನಿ ಮೋದಿ ‘ಅಯ್ಯೋ’ ಎಂದು ಉದ್ಘರಿಸಿದ್ದಾರೆ. ತಾವು ಸ್ಪೂರ್ತಿದಾಯಕ ಕಂಟೆಂಟ್ ಗಳನ್ನು ಇಷ್ಟಪಡುವುದಾಗಿ ಅವರು ಈ ಸಂದರ್ಭ ತಿಳಿಸಿದರು .
ಅಯ್ಯೋ ಶ್ರದ್ಧಾ ಎಂದೇ ಖ್ಯಾತರು: ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ‘ಅಯ್ಯೋ ಶ್ರದ್ಧಾ’ ಎಂದೇ ಪ್ರಸಿದ್ಧರು. ಯೂಟ್ಯೂಬ್, ಇನ್ಟಾಗ್ರಾಂ, ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳಿದ್ದಾರೆ.
ಮುಂಬೈಯಲ್ಲಿ ಹುಟ್ಟಿ ಬೆಳೆದ ಶ್ರದ್ಧಾ ಜೈನ್ ಕಾರ್ಕಳ ತಾಲೂಕಿನ ನೆಲ್ಲಿಕಾರಿನವರು. ವರ್ಧಮಾನ್ ಜೈನ್ , ಸುಶೀಲಾ ಜೈನ್ ದಂಪತಿಯ ಪುತ್ರಿ.
ಬೆಂಗಳೂರಿನ ಗೌತಂ ಜೈನ್ ಅವರನ್ನು ವಿವಾಹವಾಗಿದ್ದಾರೆ. ತಂದೆ ಮುಂಬೈಯ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿ ನಿವೃತ್ತರು. ತಾಯಿ ಸುಶೀಲ ಜೈನ್ ಮುಂಬೈಯಲ್ಲಿ ಕನ್ನಡ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಕನ್ನಡದ ಖ್ಯಾತ ನಟ ನಿರ್ದೇಶಕ ರಿಷಬ್ ಶೆಟ್ಟಿ, ನಟ ಯಶ್ ಅವರ ಜೊತೆ ಶ್ರದ್ಧಾ ಜೈನ್ ಅವರನ್ನೂ ಕೂಡ ದೆಹಲಿಗೆ ಪ್ರಧಾನಿ ಮೋದಿ ಆಹ್ವಾನಿಸಿದ್ದರು.