ಕುಕನೂರು: ಪ್ರಧಾನ ನರೇಂದ್ರ ಮೋದಿ ಸಮೃದ್ಧ ಭಾರತಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಮಗಜ ಭವನದಲ್ಲಿ ಯಲಬುರ್ಗಾ ಮಂಡಲದ ಕುಕನೂರ,ಮಂಗಳೂರ, ತಳಕಲ್ ಹಾಗೂ ಇಟಗಿ ಮಹಾ ಶಕ್ತಿ ಕೇಂದ್ರಗಳ ಬಿಎಲ್ಎ 2 ಹಾಗೂ ಬೂತ್ ಅಧ್ಯಕ್ಷರ ಕಾರ್ಯಾಗಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಭಾರತ ದಿವ್ಯತೆ ಪಡೆಯುತ್ತಿದೆ. ಭವ್ಯ ಭಾರತಕ್ಕೆ ಪೂರಕ ಯೋಜನೆ ಪ್ರಧಾನಿ ನರೇಂದ್ರ ಮೋದಿ ಕೊಡುಗೆಯಾಗಿ ನೀಡಿದ್ದಾರೆ. ಬಿಜೆಪಿ ಸಹ ರಾಷ್ಟ್ರೀಯತೆ ಧ್ಯೋತಕವಾಗಿ ಭಾರತದ ವಿಶ್ವಗುರು ಸಂಕಲ್ಪದಿಂದ ಕಾರ್ಯ ಮಾಡುತ್ತಿದೆ. ಬಿಜೆಪಿ ಪಕ್ಷ ಹಿರಿಯರು ತಳಮಟ್ಟದಿಂದ ಕಟ್ಟಿದ್ದಾರೆ. ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷಕ್ಕೆ ಗಟ್ಟಿಯಾದ ಕಾರ್ಯಕರ್ತರಿದ್ದಾರೆ. ಬಿಜೆಪಿಯ ಸಂಘಟನೆ ಒಗ್ಗಟ್ಟಿನ ಪ್ರತೀಕ.ವಿಜಯದ ಸಂಕಲ್ಪ ಬಿಜೆಪಿಯ ಗುರಿಯಾಗಿದೆ. ರಾಜ್ಯ, ಕ್ಷೇತ್ರದಲ್ಲಿ ಅತೀ ಹೆಚ್ಚು ಜನರು ಬಿಜೆಪಿಯನ್ನು ಬೆಂಬಲಿಸಿ ಮುಂದಿನ ವಿಜಯಕ್ಕೆ ಅಣಿಯಾಗುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನತೆ ಬೇಸತ್ತಿದ್ದಾರೆ. ಜನರೊಂದಿಗೆ ಬೇರೆಯುವ ಬಿಜೆಪಿಯತ್ತ ಜನರ ಚಿತ್ತವಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮೃದ್ಧ ಭಾರತದ ಸಂಕಲ್ಪ ಹಾಗೂ ಪಕ್ಷದ ಜನಪರ ಕಾರ್ಯ ಜನರ ಮನೆ, ಮನ ಮುಟ್ಟಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಹೊಣೆಗಾರಿಗೆ ಪ್ರತಿಯೊಬ್ಬರದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಸಹಜ ಪ್ರಕ್ರಿಯೆಯಾಗಿದ್ದು, ದೇಶದ 26 ರಾಜ್ಯಗಳಲ್ಲಿ ಎಸ್‌ಐಆರ್ ಜಾರಿಯಲ್ಲಿದೆ. ಮತದಾರರ ಪಟ್ಟಿ ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಕ್ರಮ ನುಸುಳುಕೋರರು ಹಾಗೂ ವಲಸಿಗರ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅರ್ಹ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಕಾರ್ಯ ನಡೆಯುತ್ತಿದೆ. ಆದರೆ ಕಾಂಗ್ರೆಸ್ ಎಸ್‌ಐಆರ್ ಕುರಿತು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ ಎಂದು ಟೀಕಿಸಿದರು.

ಯಲಬುರ್ಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 7,489 ಜನರನ್ನು ಸಾವಿರ ಮತದಾರರ ವಿವರಗಳನ್ನು ಪರಿಷ್ಕರಣೆ ವೇಳೆ ಕೈಬಿಡಲಾಗಿದ್ದು, ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರಗೊಳಿಸುವ ಕಾರ್ಯ ನಡೆಯುತ್ತಿದೆ. ವರ್ಷಾಂತ್ಯದಲ್ಲಿ ನಡೆಯುವ ಸಾಧ್ಯತೆಯಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಈಗಿನಿಂದಲೇ ಶ್ರಮಿಸಬೇಕು ಎಂದು ಕರೆ ನೀಡಿದರು.


ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಕಾಂಗ್ರೆಸ್ ಪಕ್ಷದಿಂದ ಆಯಾ ಕ್ಷೇತ್ರಗಳ ಶಾಸಕರೇ ಬೂತ್ ಲೆವೆಲ್ ಏಜೆಂಟ್‌ಗಳಾಗಿ (ಬಿಎಲ್ಎ) ಕಾರ್ಯನಿರ್ವಹಿಸುತ್ತಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಕ್ಷೇತ್ರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಗಂಗಾವತಿ ಕ್ಷೇತ್ರದಲ್ಲಿ ಸಂಸದ ರಾಜಶೇಖರ ಹಿಟ್ನಾಳ ಬಿ.ಎಲ್.ಎಗಳಾಗಿದ್ದಾರೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರೇ ಬಿಎಲ್ಎಗಳಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ತಮ್ಮದೇ ಪಕ್ಷದ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲದ ಕಾರಣ ಶಾಸಕರನ್ನೇ ಬಿಎಲ್ಎಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಈ ಗುಳಗಣ್ಣವರ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಗಟ್ಟಿಯೂತವಾಗಿದೆ. ಬಿಜೆಪಿಯ ಹಲವಾರು ಯೋಜನೆ ಭಾರತಕ್ಕೆ ಶಕ್ತಿ ನೀಡಿವೆ. ಬಿಜೆಪಿ ಪಕ್ಷ ಕೇಂದ್ರದ ಆಡಳಿತ ವೈಖರಿ ಅನ್ಯ ದೇಶಗಳು ಅನುಸರಿಸುತ್ತಿವೆ. ಬಿಎಲ್ಎ-1 ಹಾಗೂ ಬಿಎಲ್ಎ-2 ಕಾರ್ಯಕರ್ತರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಮತದಾರರ ಪಟ್ಟಿ ಪರಿಷ್ಕರಣೆ, ಮ್ಯಾಪಿಂಗ್ ಹಾಗೂ ಹೊಸ ಮತದಾರರ ಸೇರ್ಪಡೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದರು.

ಮಹಿಳಾ ಹಾಗೂ ಯುವ ಮತದಾರರ ಸಂಪರ್ಕಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ಐವರು ಸದಸ್ಯರ ತಂಡ ರಚಿಸಲಾಗಿದೆ. ಮಂಡಲ ವ್ಯಾಪ್ತಿಯಲ್ಲಿ 268 ಬಿಎಲ್ಎ 2 ಕಾರ್ಯಕರ್ತರಿದ್ದು, ಸಂಘಟನೆ ಬಲಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಯಲಬುರ್ಗಾ ಮಂಡಲ ಬಿಜೆಪಿ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಎಸ್‌ಐಆರ್ ಅಡಿಯಲ್ಲಿ ಮತದಾರರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಬಿಎಲ್ಎ-2 ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಗೌರಾ,ಶಿವಲೀಲಾ ದಳವಾಯಿ, ಅಂಬರೀಷ್ ಹುಬ್ಬಳ್ಳಿ, ಶಿವಕುಮಾರ ನಾಗಲಪುರಮಠ, ಶರಣಪ್ಪ ಬಣ್ಣದಬಾವಿ, ಲಕ್ಷ್ಮಣ ಕಾಳಿ, ಸುಭಾಷ್ ಪೂಜಾರ, ಮಾರುತಿ ಗಾವರಾಳ, ಬಸವಲಿಂಗಪ್ಪ ಭೂತೆ, ಬಸವರಾಜ ಹಾಳಕೇರಿ, ಈರಣ್ಣ ಹುಬ್ಬಳ್ಳಿ, ಅಯ್ಯನಗೌಡ್ರ ಕೆಂಚಣ್ಣನವ್ವರ್, ಶರಣಪ್ಪ ಗುಂಗಾಡಿ, ಶರಣಪ್ಪ ಈಳಗಿ, ಬಸವನಗೌಡ ತೊಂಡಿಹಾಳ, ಶಂಭು ಜೋಳದ, ಮಂಜುನಾಥ ನಾಡಗೌಡ, ಶಿವರಾಜಗೌಡ್ರು, ಯಲ್ಲಪ್ಪಗೌಡ್ರು, ಬಾಲರಾಜ ಗಾಳಿ, ಪ್ರಭುಗೌಡ ಪಾಟೀಲ, ರಶೀದಸಾಬ್ ಹಣಗಿ, ವಿಶ್ವನಾಥ ಮರಿಬಸಪ್ಪ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ ಸೇರಿದಂತೆ ಅನೇಕ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿದ್ದರು.