ಕೊಟ್ಟ ಮಾತಿನಂತೆ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ

| Published : May 14 2024, 01:02 AM IST

ಸಾರಾಂಶ

ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಬಾಗಲಕೋಟೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಚಿತ್ರ ಬಿಡಿಸಿ, ಪ್ರದರ್ಶಿಸಿ ಗಮನ ಸೆಳೆದಿದ್ದ ಬಾಗಲಕೋಟೆಯ ಯುವತಿಗೆ ಮೋದಿಯವರು ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಬಾಗಲಕೋಟೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಚಿತ್ರ ಬಿಡಿಸಿ, ಸಮಾವೇಶದ ಸಂದರ್ಭದಲ್ಲಿ ಬಹಿರಂಗವಾಗಿ ಪ್ರದರ್ಶಿಸಿ ಗಮನ ಸೆಳೆದಿದ್ದ ಬಾಗಲಕೋಟೆಯ ಯುವತಿಗೆ ಕೊಟ್ಟ ಮಾತಿನಂತೆ ಮೋದಿಯವರು ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಏಪ್ರಿಲ್‌ 29ರಂದು ಲೋಕಸಭೆ ಚುನಾವಣೆಯ ಪ್ರಚಾರಾರ್ಥರಾಗಿ ಪ್ರಧಾನಿ ಮೋದಿ ಬಾಗಲಕೋಟೆಗೆ ಆಗಮಿಸಿದ್ದರು. ಸಮಾವೇಶದ ಮುಂದಿನ ಸಾಲಿನಲ್ಲಿ ನಿಂತಿದ್ದ ನಾಗರತ್ನ ಮೇಟಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ಜೊತೆಗಿರುವ ಸ್ಕೆಚ್‌ ಬಿಡಿಸಿ ಫ್ರೇಮ್‌ ಹಾಕಿಸಿ ಪ್ರದರ್ಶಿಸಿದ್ದಳು. ವೇದಿಕೆಯಿಂದಲೇ ಇದನ್ನು ಗಮನಿಸಿದ್ದ ಪ್ರಧಾನಿ ಮೋದಿ ಅವರು ಎಸ್‌ಪಿಜೆ ಸಿಬ್ಬಂದಿಗೆ ಹೇಳಿ ಯುವತಿ ಬಿಡಿಸಿದ ಸ್ಕೆಚ್‌ ತರಿಸಿಕೊಂಡು ಹೆಸರು ಹಾಗೂ ವಿಳಾಸ ಬರೆದುಕೊಡು ದೆಹಲಿಗೆ ಹೋದ ಮೇಲೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದರು.

ಕೊಟ್ಟ ಮಾತಿನಂತೆ ಯುವತಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದು, ಇದು ಪೋಸ್ಟ್ ಮೂಲಕ ಮೇ 5ರಂದು ನಾಗರತ್ನ ಮೇಟಿ ಮನೆಗೆ ತಲುಪಿದೆ. ಪ್ರಧಾನಿಯ ಪತ್ರ ಕಂಡು ಯುವತಿ ಹಾಗೂ ಮನೆಯವರು ಸಂತಸಗೊಂಡಿದ್ದಾರೆ.