ಕನ್ನಡಪ್ರಭ ವಾರ್ತೆ ನಾಗಮಂಗಲ

ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶ ಮುಕ್ತ ಯುವ ಚಳವಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಭಾನುವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಬಿಜಿಎಸ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಸ್.ಎನ್.ಶ್ರೀಧರ್ ಸೇರಿದಂತೆ ವೈದ್ಯಕೀಯ ಮತ್ತು ನರ್ಸಿಂಗ್ ವಿಭಾಗದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವ್ಯಸನದ ವಿರುದ್ಧ ಇಂದಿನ ಯುವ ಪೀಳಿಗೆ ಘೋಷವಾಕ್ಯದೊಂದಿಗೆ ನಶ ಮುಕ್ತ ಯುವ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಯುವಶಕ್ತಿಯ ಮೇಲೆ ನನಗೆ ಅಪಾರವಾದ ನಂಬಿಕೆ ವಿಶ್ವಾಸವಿದೆ. 2047ರ ವೇಳೆಗೆ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿಸಲು ಯುವಶಕ್ತಿಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದರು.

ಯುವಜನರ ಸಾಮರ್ಥ್ಯ ಮತ್ತು ಕ್ರಿಯಾಶೀಲತೆಯನ್ನು ರಾಷ್ಟ್ರ ನಿರ್ಮಾಣದತ್ತ ತೊಡಗಿಸಲು ಮಾದಕದ್ರವ್ಯ ಮುಕ್ತ ಸಮಾಜದ ನಿರ್ಮಾಣ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ದೇಶವ್ಯಾಪಿ ಸಮರ ಸಾರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.


ಮಾದಕ ದ್ರವ್ಯಕ್ಕೆ ಬಲಿಯಾಗುವ ಯುವ ಸಮೂಹದಿಂದ ದೇಶದ ಆರ್ಥಿಕ ಉತ್ಪಾದಕತೆ ಕುಸಿಯುತ್ತದೆ. ಅಂತಹ ಯುವ ಜನರ ಆರೋಗ್ಯ ರಕ್ಷಣೆ ಮತ್ತು ಪುನರ್ವಸತಿಗೆ ಸರ್ಕಾರ ಹಾಗೂ ಕುಟುಂಬಗಳು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವಸಮೂಹ ಹೊಂದಿರುವ ನಮ್ಮ ದೇಶದ ಯುವಶಕ್ತಿಯು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗದೆ ತಮ್ಮಲ್ಲಿರುವ ಜ್ಞಾನ, ಕೌಶಲದಿಂದ ನಾವಿನ್ಯತೆ ಮತ್ತು ತಂತ್ರಜ್ಞಾನವನ್ನು ಬಳಸಿ ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ದೇಶದ ಯುವ ಜನತೆ ನಶ ಮುಕ್ತ ರಾಷ್ಟ್ರದ ಶಪಥ ಮಾಡಬೇಕು ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಸ್.ಎನ್.ಶ್ರೀಧರ ಮಾತನಾಡಿ, ಮಾದಕ ವಸ್ತು ವ್ಯಕ್ತಿ, ಯುವಕರ ಜೀವನ, ಸಮಾಜವನ್ನು ಹಾಳು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಸಮೂಹ ಮಾದಕ ವಸ್ತು ಸೇವನೆಯನ್ನು ಒಂದು ಚಟವಾಗಿಸಿಕೊಂಡು ದುರಂತ ಅಂತ್ಯ ಕಾಣುತ್ತಿರುವುದನ್ನು ನೋಡುತ್ತಿದ್ದೇವೆ. ವಿದ್ಯಾರ್ಥಿಗಳು ಇದರ ವಿರುದ್ಧ ಹೋರಾಡುವ ಮೂಲಕ ಸ್ವಾಸ್ತ್ಯ ಸಮಾಜವನ್ನು ನಿರ್ಮಿಸಬೇಕು ಎಂದರು.

ಆದಿಚುಂಚನಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಪಿ.ಧರ್ಮೇಂದ್ರ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಯುವ ಸಮೂಹದ ಪಾತ್ರ ಬಹುಮುಖ್ಯ. ನಶೆ ಅಮಲಿನಲ್ಲಿ ಅಪರಾಧಗಳಲ್ಲಿ ಭಾಗಿಯಾಗಿ ಕುಟುಂಬದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಸ್ವಾಸ್ತ್ಯ ಪೂರ್ಣ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಮಾದಕ ವಸ್ತುಗಳ ವ್ಯಸನದಿಂದ ದೂರವಿರುವಂತೆ ಯುವ ಸಮೂಹ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಮುಖ್ಯ ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವ ಜನರ ಮೇಲೆ ಅಪಾರ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ದೇಹಕ್ಕೆ ಕ್ರೀಡೆ ಮತ್ತು ವ್ಯಾಯಾಮ ಬಹಳ ಮುಖ್ಯ. ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಕಾಲ ಯೋಗ, ವಾಯುವಿಹಾರ ಮಾಡಿ ಆರೋಗ್ಯವಂತರಾಗಿರಬೇಕು ಎಂದರು.

ಈ ವೇಳೆ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ರಮೇಶ್, ಆಸ್ಪತ್ರೆ ಪ್ರಭಾರ ಮುಖ್ಯಸ್ಥ ಕೆ.ಎಸ್.ರವಿ, ಉಪ ಪ್ರಾಂಶುಪಾಲೆ ಎಚ್.ಎಲ್.ತೇಜಸ್ವಿನಿ ಸೇರಿದಂತೆ ವೈದ್ಯಕೀಯ, ನರ್ಸಿಂಗ್ ಮತ್ತು ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಆಸ್ಪತ್ರೆಯ ಸಿಬ್ಬಂದಿ ಇದ್ದರು.