ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಗೀತೆ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗೀತೆಯ 15ನೇ, ಊರ್ಧ್ವ-ಮೂಲಮಧಃ-ಶಾಖ ಅಶ್ವತ್ಥಂ ಎಂದು ಪ್ರಾರಂಭವಾಗುವ ಪುರುಷೋತ್ತಮಯೋಗ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು
ಉಡುಪಿ: ಲಕ್ಷ ಕಂಠ ಗೀತೆ ಪಾರಾಯಣದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗೀತೆಯ 15ನೇ, ಊರ್ಧ್ವ-ಮೂಲಮಧಃ-ಶಾಖ ಅಶ್ವತ್ಥಂ ಎಂದು ಪ್ರಾರಂಭವಾಗುವ ಪುರುಷೋತ್ತಮಯೋಗ ಅಧ್ಯಾಯದ ಶ್ಲೋಕಗಳನ್ನು ಪಠಿಸಿದರು, ಈ ಸಂದರ್ಭದಲ್ಲಿ ಅವರೊಂದಿಗೆ ಈ ಶ್ಲೋಕಗಳನ್ನು ಪಠಿಸುತ್ತಿದ್ದ ಭಕ್ತರ ಧ್ವನಿ ತಾರಕಕ್ಕೇರಿತ್ತು.ಚಂದ್ರಚೂಡ ಶಿವಶಂಕರ...:ಎಲ್ಲರಿಗೂ ನಮಸ್ಕಾರಗಳು ಎಂದು ಭಾಷಣ ಆರಂಭಿಸಿದ ಮೋದಿ, ನಡುವೆ ಗೀತೆಯ ಅನೇಕ ಶ್ಲೋಕಗಳನ್ನು ಉದ್ಧರಿಸಿದರು. ಉಡುಪಿಗೂ ದಾಸರಿಗೂ ಇರುವ ಸಂಬಂಧವನ್ನು ವಿವರಿಸುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಪುರಂದರ ದಾಸರ ‘ಚಂದ್ರಚೂಡ ಶಿವಶಂಕರ ಪಾರ್ವತಿ...’ ಎಂಬ ಹಾಡು ಯುವಜನತೆಯಲ್ಲಿ ಭಕ್ತಿಭಾವಕ್ಕೆ ಕಾರಣವಾಗಿದೆ ಎಂದರು. ಕನಕದಾಸನ ಕಿಂಡಿಯಲ್ಲಿ ಕೃಷ್ಣನನ್ನು ನೋಡಿದಾಗ ವಿಶೇಷವಾದ ಭಕ್ತಿಯ ಅನುಭೂತಿ ತನಗಾಯಿತು ಎಂದರು.
ಮಕ್ಕಳಿಂದ ಚಿತ್ರ ಪಡೆದರು:ಸಭಾಂಗಣದ ಪಕ್ಕದಲ್ಲಿ ತಡೆಗಳ ಹಿಂದೆ ಮಕ್ಕಳು ಅವರೇ ಬರೆದ, ತಮ್ಮ ಚಿತ್ರಗಳನ್ನು ಹಿಡಿದು ನಿಂತಿದ್ದನ್ನು ಗಮನಿಸಿದ ಮೋದಿ, ತಮ್ಮ ಎಸ್‌ಪಿಜಿ ಸಿಬ್ಬಂದಿಗೆ ಅವುಗಳನ್ನು ಮಕ್ಕಳ ಹೆಸರು ವಿಳಾಸದೊಂದಿಗೆ ಸಂಗ್ರಹಿಸಿ ತರುವಂತೆ ಸೂಚಿಸಿದರು, ಮಕ್ಕಳನ್ನು ನಿರಾಸೆ ಮಾಡಬಾರದು, ಇದರಿಂದ ಅವರಿಗೆ ಮಾತ್ರವಲ್ಲ ತನಗೂ ನೋವಾಗುತ್ತದೆ, ಮಕ್ಕಳ ವಿಳಾಸಕ್ಕೆ ಕೃತಜ್ಞತಾ ಪತ್ರ ಬರೆಯುತ್ತೇನೆ ಎಂದರು.ಉಡುಪಿ-ದ್ವಾರಕೆ ಸಂಬಂಧ:
ಉಡುಪಿಗೂ ತಾನು ಹುಟ್ಟಿದ ಗುಜರಾತಿನ ದ್ವಾರಕೆಗೂ ಗಾಢವಾದ ಸಂಬಂಧವಿದೆ. ಉಡುಪಿಯಲ್ಲಿ ಪೂಜಿಸಲ್ಪಡುವ ಕೃಷ್ಣನ ವಿಗ್ರಹವನ್ನು ಹಿಂದೆ ದ್ವಾರಕೆಯಲ್ಲಿ ರುಕ್ಮಿಣಿ ಪೂಜೆ ಸಲ್ಲಿಸುತ್ತಿದ್ದಳಂತೆ, ದ್ವಾರಕೆ ಈಗ ಸಾಗರದಲ್ಲಿ ಮುಳುಗಿದೆ. ನಾನು ಇತ್ತೀಚಗೆ ಸಾಗರದಾಳಕ್ಕೆ ತೆರಳಿ ದ್ವಾರಕೆಯನ್ನು ನೋಡಿ ನಮಿಸಿ ಬಂದಿದ್ದೇನೆ ಎಂದರು.ಅಯೋಧ್ಯೆಯ ಮಧ್ವ ದ್ವಾರ:
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರ ಪಾತ್ರ ದೊಡ್ಡದಿದೆ. ಮಧ್ವಾಚಾರ್ಯರು ರಾಮನನ್ನು 6 ದಿವ್ಯಗುಣಗಳುಳ್ಳ ಸರ್ವೇಶ್ವರ, ಅಪಾರ ಶಕ್ತಿವಂತ ಎಂದು ಕರೆದಿದ್ದಾರೆ. ಅಂತಹ ಮಧ್ವಾಚಾರ್ಯರ ಹೆಸರನ್ನು ಆಯೋಧ್ಯೆಯ ರಾಮಮಂದಿರದ ದ್ವಾರವೊಂದಕ್ಕೆ ಇಟ್ಟು ಗೌರವ ಸಲ್ಲಿಸಲಾಗಿದೆ ಎಂದು ಮೋದಿ ಹೇಳಿದಾಗ ಭಕ್ತರ ಕರತಾಡನ ಮುಗಿಲು ಮುಚ್ಚಿತ್ತು.