ರಾಜಧಾನಿಯಲ್ಲಿ ಗುಲಾಬಿ ಮಾರ್ಗದ ಮೆಟ್ರೋ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿಯಲ್ಲಿ ಗುಲಾಬಿ ಮಾರ್ಗದ ಮೆಟ್ರೋ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಮೆಟ್ರೋ ಕ್ರೆಡಿಟ್ ವಾರ್ ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಸೀಮಿತವಾಗದೆ, ಉಭಯ ಪಕ್ಷಗಳ ಕಾರ್ಯಕರ್ತರ ಹಂತಕ್ಕೂ ತಲುಪಿತ್ತು.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರವಿದ್ದ ಬಿತ್ತಿ ಫಲಕ ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಬಿಳೇಕಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಜಮಾಯಿಸಿದ್ದರು. ಪ್ರಧಾನಿ ಮೋದಿ ಅವರ ಬಿತ್ತಿ ಫಲಕ ಹಿಡಿದು ಬಿಜೆಪಿ ಕಾರ್ಯಕರ್ತರೂ ಸಹ ಆಗಮಿಸಿದ್ದರು. ಉಭಯ ಪಕ್ಷಗಳ ಕಾರ್ಯಕರ್ತರು ಪೈಪೋಟಿಗೆ ಬಿದ್ದವರಂತೆ ಡಿ.ಕೆ.ಶಿವಕುಮಾರ್ ಮತ್ತು ನರೇಂದ್ರ ಮೋದಿ ಪರ ಘೋಷಣೆ ಕೂಗುವ ದೃಶ್ಯಗಳು ಬಹುತೇಕ ಕಡೆ ಕಾಣ ಸಿಕ್ಕಿತು.ಬಿಜೆಪಿ-ಕೈ ಕಾರ್ಯಕರ್ತರ ಘೋಷಣೆ ವಾರ್:ಐಐಎಂಬಿ ಆಡಿಟೋರಿಯಂ ಹೊರಗೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘೋಷಣೆ ಯುದ್ಧವೇ ನಡೆಯಿತು. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಹೆಸರಿನ ಬಿತ್ತಿ ಫಲಕ ಹಿಡಿದು ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು ಡಿಕೆ, ಡಿಕೆ...ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ನರೇಂದ್ರ ಮೋದಿ ಅವರ ಹೆಸರಿನ ಬಿತ್ತಿ ಫಲಕ ಹಿಡಿದು ಬಂದಿದ್ದ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ..ಎಂದು ಘೋಷಣೆ ಕೂಗಿದರು. ಉಭಯ ಪಕ್ಷಗಳ ಕಾರ್ಯಕರ್ತರು ಜಿದ್ದಿಗೆ ಬಿದ್ದವರಂತೆ ಘೋಷಣೆ ಕೂಗಿ ತಮ್ಮ ನಾಯಕರ ಪರ ಅಭಿಮಾನ ಮೆರೆದರು.ಬನ್ನೇರುಘಟ್ಟ ರಸ್ತೆಯ ಜೇಡಿ ಮರ ಜಂಕ್ಷನ್ನಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಿಲ್ಲಲು ಪಾದಾಚಾರಿ ಮಾರ್ಗಕ್ಕೆ ಬ್ಯಾರಿಕೇಡ್ ಅಳವಡಿಸಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಈ ನಿಗದಿತ ಜಾಗಕ್ಕೆ ತೆರಳುವ ಪ್ರತಿಯೊಬ್ಬರನ್ನು ಪೊಲೀಸರು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿದರು. ಹೆಚ್ಚಿನ ಜನ ಗುಂಪುಗೂಡಿದ್ದ ಕಡೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ನಿಗಾವಹಿಸಿದ್ದರು.ಪಾನಕ, ಮಜ್ಜಿಗೆ ವಿತರಣೆ:ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಬಿಸಿಲು ಲೆಕ್ಕಿಸದೆ ಉತ್ಸಾಹಭರಿತರಾಗಿ ಕಾದು ನಿಂತಿದ್ದ ಜನರಿಗೆ ಬಿಜೆಪಿ ಕಾರ್ಯಕರ್ತರು ವೆಗಾ ಸಿಟಿ ಮಾಲ್ ಜಂಕ್ಷನ್ನಲ್ಲಿ ಪಾನಕ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ಸುಮಾರು ಐದಾರು ಸಾವಿರ ಜನಕ್ಕೆ ನೀಡುವಷ್ಟು ಪಾನಕ ಮತ್ತು ಮಜ್ಜಿಗೆ ತಯಾರಿಸಿಕೊಂಡಿದ್ದರು. ಬಿಸಿಲ ಬೇಗೆಯಿಂದ ದಣಿದ ಜನರ ಈ ಪಾನಕ ಮತ್ತು ಮಜ್ಜಿಗೆ ಕುಡಿದು ದಾಹ ನೀಗಿಸಿಕೊಂಡರು.ಪ್ರಧಾನಿ ಕಾನ್ವೆಯತ್ತ ಕಪ್ಪು
ಟೋಪಿ ಎಸೆದ ಕಿಡಿಗೇಡಿ!ಪ್ರಧಾನಿ ನರೇಂದ್ರ ಮೋದಿ ಅವರು ತಾವರೆಕೆರೆ ಮೆಟ್ರೋ ನಿಲ್ದಾಣದ ಬಳಿ ಆಗಮಿಸುವ ವೇಳೆ ಕಿಡಿಗೇಡಿಯೊಬ್ಬ ಕಪ್ಪು ಬಣ್ಣದ ಟೋಪಿಯನ್ನು ಎಸೆದ ಘಟನೆಯೂ ಜರುಗಿತು. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಇನ್ಸ್ಪೆಕ್ಟರ್ ಅವರು ತಕ್ಷಣ ಕಾನ್ವೆ ಮೇಲೆ ಆ ಟೋಪಿ ಬೀಳದಂತೆ ಹಿಡಿದುಕೊಂಡರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್, ರಾಹುಲ್ ಎಂದು ಘೋಷಣೆ ಕೂಗಿದರೆ, ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.