ಮಕ್ಕಳಲ್ಲಿನ ಕಲ್ಪನೆಗಳಿಗೆ ಬಣ್ಣದ ರೂಪ ಕೊಟ್ಟು, ಆಲೋಚನೆಗಳನ್ನು ತುಂಬುವ ಚಿತ್ರಕಲಾ ಸ್ಪರ್ಧೆಯನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸತತ 8ನೇ ವರ್ಷ ಹುಬ್ಬಳ್ಳಿಯಲ್ಲಿ ಆಯೋಜಿಸಿತು. ಈ ಸ್ಪರ್ಧೆಗೆ ವಿವಿಧ ಶಾಲೆಗಳಿಂದ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ:ಮಕ್ಕಳಲ್ಲಿನ ಕಲ್ಪನೆಗಳಿಗೆ ಬಣ್ಣದ ರೂಪ ಕೊಟ್ಟು, ಆಲೋಚನೆಗಳನ್ನು ತುಂಬುವ ಚಿತ್ರಕಲಾ ಸ್ಪರ್ಧೆಯನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸತತ 8ನೇ ವರ್ಷ ಹುಬ್ಬಳ್ಳಿಯಲ್ಲಿ ಆಯೋಜಿಸಿತು. ಈ ಸ್ಪರ್ಧೆಗೆ ವಿವಿಧ ಶಾಲೆಗಳಿಂದ 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿದರು.

ಮಕ್ಕಳ ದಿನಾಚರಣೆ ಮುನ್ನಾದಿನ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣ ಇದಕ್ಕೆ ಸಾಕ್ಷಿಯಾಯಿತು. ಮಕ್ಕಳ ಕೈಯಿಂದ ಅರಳಿದ ತರಹೇವಾರಿ ಕಲ್ಪನೆಯ ಚಿತ್ರಗಳು ಸ್ಪರ್ಧೆಗೆ ಮತ್ತಷ್ಟು ಮೆರುಗು ನೀಡಿದವು.

ಮಕ್ಕಳ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಬಣ್ಣದ ರೂಪ ನೀಡುವ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸತತವಾಗಿ ಕಳೆದ ಎಂಟು ವರ್ಷಗಳಿಂದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆಯು ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದಲೇ ಗಾಜಿನ ಮನೆಯ ಆವರಣ ಮಕ್ಕಳ ಕಲರವದಿಂದ ಕಳೆಗಟ್ಟಿತ್ತು. ಕೈಯಲ್ಲಿ ಬಣ್ಣದ ಪೆನ್ಸಿಲ್, ಕುಂಚ, ಬಣ್ಣದ ಡಬ್ಬಿ, ಬ್ರಶ್ ಹಿಡಿದ ವಿದ್ಯಾರ್ಥಿಗಳ ಮುಖದಲ್ಲಿ ಸ್ಪರ್ಧೆಯ ಉತ್ಸಾಹ ಎದ್ದು ಕಾಣುತ್ತಿತ್ತು. ಪ್ರತಿಯೊಬ್ಬರಲ್ಲೂ, ನಾನು ಈ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ಬಿಡಿಸಿ ಪ್ರಥಮ ಬಹುಮಾನವಾದ ಸೈಕಲ್‌ ಪಡೆಯುತ್ತೇನೆಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಇಡೀ ಪರಿಸರವೇ ಬಣ್ಣಗಳ ಲೋಕವಾಗಿ ಕಂಗೊಳಿಸಿತು.ಪ್ರತಿ ತರಗತಿಗೆ ಪ್ರತ್ಯೇಕ ವಿಷಯ:

ಪ್ರತಿ ತರಗತಿಗೆ ಪ್ರತ್ಯೇಕ ವಿಷಯ ನೀಡಿ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳ ವಯಸ್ಸು, ಗ್ರಹಿಕೆ ಹಾಗೂ ಚಿತ್ರಕಲಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಹಸಿರು ಜೀವನ, 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬರಗಾಲದ ತೀವ್ರತೆ ವಿಷಯಗಳು ಮಕ್ಕಳ ಕುಂಚದಲ್ಲಿ ಜೀವಂತಿಕೆ ಪಡೆದವು.8 ವರ್ಷಗಳ ಕಲಾ ಅಭಿಯಾನ:

ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಬಣ್ಣದ ಮೆರುಗು ನೀಡಿದ ಕನ್ನಡಪ್ರಭದ ಈ ಪ್ರಯತ್ನ, ಎಂಟು ವರ್ಷಗಳ ಪಯಣದೊಂದಿಗೆ ಮತ್ತಷ್ಟು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಸ್ಪರ್ಧೆಯ ಬಹುಮಾನಕ್ಕಿಂತಲೂ ಭಾಗವಹಿಸುವ ಅವಕಾಶ, ತಮ್ಮ ಕಲ್ಪನೆಗೆ ರೂಪ ನೀಡಿದ ಸಂತಸವೇ ಮಕ್ಕಳ ಪಾಲಿಗೆ ದೊಡ್ಡ ಸಂಭ್ರಮವಾಗಿತ್ತು ಎಂಬುದು ವಿಜೇತ ಮಕ್ಕಳ ಮಂದಹಾಸದಲ್ಲಿ ಕಾಣುತ್ತಿತ್ತು. ಪ್ರತಿ ತರಗತಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ, ನಗದು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಖ್ಯಾತ ಗಾಯಕಿ ಮಹನ್ಯ ಗುರು ಪಾಟೀಲ, ಇಡೀ ಚಿತ್ರಕಲಾ ಸ್ಪರ್ಧೆಗೆ ಹಾಗೂ ಭಾಗವಹಿಸಿದ ಮಕ್ಕಳಿಗೆ ಹಾಡುಗಳ ಮೂಲಕ ಸ್ಫೂರ್ತಿ ತುಂಬಿದರು. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ, ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ವೆಂಕಟೇಶ್ವರ ಎಲೆಕ್ಟ್ರಿಲ್‌ ಆ್ಯಂಡ್‌ ಎಂಜಿನಿಯರಿಂಗ್‌ ವರ್ಕ್ಸ್‌ನ ಮಾಲೀಕ ಪರಶುರಾಮ ಪೂಜಾರ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕನ್ನಡಪ್ರಭ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ವಹಿಸಿದ್ದರು. ಬಹುಮಾನ ವಿತರಣೆಯನ್ನು ಕನ್ನಡಪ್ರಭ ಹುಬ್ಬಳ್ಳಿಯ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ನೆರವೇರಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಮುಖ್ಯ ವರದಿಗಾರ ಶಿವಾನಂದ ಗೊಂಬಿ ವಂದಿಸಿದರು.