ಸಾರಾಂಶ
ಸಾಮಾಜಿಕ, ಆಧ್ಯಾತ್ಮಿಕ ಮತ್ತು ರಾಜಕೀಯ ಜೀವನದ 75 ಯಶಸ್ವಿ ವರ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಪೂರ್ಣಗೊಳಿಸಿರುವ ಹಿನ್ನೆಲೆ ತಾಲೂಕಿನ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶುಭಾಶಯ ತಿಳಿಸಿ, ಅವರಿಗೆ ದೀರ್ಘ, ಆರೋಗ್ಯಕರ ಮತ್ತು ಆಧ್ಯಾತ್ಮಿಕವಾಗಿ ನೆಮ್ಮದಿಯ ಜೀವನವನ್ನು ಕರುಣಿಸಲು ಪರಮಾತ್ಮನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಶಿರಸಿ:
ಸಾಮಾಜಿಕ, ಆಧ್ಯಾತ್ಮಿಕ ಮತ್ತು ರಾಜಕೀಯ ಜೀವನದ 75 ಯಶಸ್ವಿ ವರ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಪೂರ್ಣಗೊಳಿಸಿರುವ ಹಿನ್ನೆಲೆ ತಾಲೂಕಿನ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶುಭಾಶಯ ತಿಳಿಸಿ, ಅವರಿಗೆ ದೀರ್ಘ, ಆರೋಗ್ಯಕರ ಮತ್ತು ಆಧ್ಯಾತ್ಮಿಕವಾಗಿ ನೆಮ್ಮದಿಯ ಜೀವನವನ್ನು ಕರುಣಿಸಲು ಪರಮಾತ್ಮನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.ಈ ಆಶೀರ್ವಾದ ಪತ್ರವನ್ನು ಪ್ರಧಾನಿಗೆ ಹಸ್ತಾಂತರಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನೀಡಿರುವ ಶ್ರೀಗಳು, ಪ್ರಧಾನಿಯವರ ಬುದ್ಧಿವಂತ, ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಮಾತೆ ಮತ್ತು ಸನಾತನ ಧರ್ಮವು ಇನ್ನಷ್ಟು ಉನ್ನತ ಶಿಖರಗಳನ್ನು ಏರಲಿ ಎಂದು ಹಾರೈಸಿದ್ದಾರೆ.
ರಾಷ್ಟ್ರವು ಆಂತರಿಕ ಮತ್ತು ಬಾಹ್ಯ ಭದ್ರತೆ, ಕೈಗಾರಿಕಾ ಮತ್ತು ಆರ್ಥಿಕ ಪ್ರಗತಿ, ರಾಷ್ಟ್ರೀಯ ಅಭಿವೃದ್ಧಿ ಹಾಗೂ ಪ್ರತಿಯೊಬ್ಬ ನಾಗರಿಕನ ಕಲ್ಯಾಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಿರಂತರವಾಗಿ ಜಗತ್ತಿಗೆ ಮಾದರಿಯಾಗಲಿ ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಪರವಾಗಿ, ಭಾರತದಲ್ಲಿ ಸ್ವಚ್ಛ ನೆಲ, ಸ್ವಚ್ಛ ಜಲ, ಸ್ವಚ್ಛ ವಾಯು ಮತ್ತು ಸ್ವಚ್ಛ ಪರಿಸರವು ಸಾಕಾರಗೊಳ್ಳಬೇಕು ಎಂಬುದು ತಮ್ಮ ಆಶಯವಾಗಿದೆ. ಇದರೊಂದಿಗೆ, ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳು ಸಮಾಜದ ಎಲ್ಲಾ ವರ್ಗಗಳಿಗೂ ಸಮಾನವಾಗಿ ದೊರೆಯಬೇಕು ಮತ್ತು ನಮ್ಮ ಅಮೂಲ್ಯ ಪರಂಪರೆಯಾದ ಯೋಗ, ಆಯುರ್ವೇದ, ಧ್ಯಾನ ಮತ್ತು ಅಧ್ಯಾತ್ಮವು ವಿಶ್ವದೆಲ್ಲೆಡೆ ಪ್ರಚಾರವಾಗಬೇಕು. ಪ್ರಧಾನಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ನಿಜವಾಗಿಯೂ ಜಾಗತಿಕ ನಾಯಕನಾಗಿ (ವಿಶ್ವ ಗುರು) ಹೊರಹೊಮ್ಮಿ, ಮಾನವೀಯ ಮತ್ತು ಶಾಂತಿಯುತ ವಿಶ್ವಕ್ಕಾಗಿ ಕೆಲಸ ಮಾಡುತ್ತದೆ ಎಂಬ ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದಿವ್ಯ ಶಕ್ತಿಗಳ ಕೃಪೆ ಹಾಗೂ ಸಂತರು-ಋಷಿಮುನಿಗಳ ಆಶೀರ್ವಾದವು ಪ್ರಧಾನಿಯವರ ರಾಷ್ಟ್ರ ಮತ್ತು ಮಾನವೀಯತೆಗಾಗಿ ಮಾಡುವ ಎಲ್ಲಾ ಉದಾತ್ತ ಕಾರ್ಯಗಳಲ್ಲಿ ಸದಾ ಜೊತೆಗಿರಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.