ಮಾನವ ಹಕ್ಕುಗಳು ಭಾಷೆ, ಬಣ್ಣ, ಜನಾಂಗ, ಲಿಂಗ, ಧರ್ಮ ಮೊದಲಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲರಿಗೂ ಸೇರಿದ ಹಕ್ಕುಗಳಾಗಿವೆ.
ಕನ್ನಡಪ್ರಭ ವಾರ್ತೆ ನಂಜನಗೂಡು
ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಘಟಕದ ಸಹಯೋಗದೊಂದಿಗೆ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಜೆಎಸ್‌ಎಸ್‌ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್ ಮಾತನಾಡಿ, ಮಾನವನ ಘನತೆ ಮತ್ತುಗೌರವವನ್ನು ಎತ್ತಿ ಹಿಡಿಯುವ ಹಕ್ಕುಗಳೆ ಮಾನವ ಹಕ್ಕುಗಳಾಗಿದ್ದು, ಪ್ರತಿವರ್ಷ ಡಿ. 10 ರಂದು ಮಾನವ ಹಕ್ಕುಗಳ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.ಮಾನವ ಹಕ್ಕುಗಳು ಭಾಷೆ, ಬಣ್ಣ, ಜನಾಂಗ, ಲಿಂಗ, ಧರ್ಮ ಮೊದಲಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಎಲ್ಲರಿಗೂ ಸೇರಿದ ಹಕ್ಕುಗಳಾಗಿವೆ. ಪ್ರತಿಯೊಂದು ಧರ್ಮವು ಮಾನವ ಹಕ್ಕುಗಳ ಅಸ್ತಿತ್ವವನ್ನು ಸೂಚಿಸುವ ಕೆಲವು ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿವೆ. ಮಾನವ ಹಕ್ಕುಗಳು ವಿಶ್ವದ ಜನರ ಹಿತಾಸಕ್ತಿಗಳನ್ನು ಕಾಪಾಡುವ ಮೂಲಕ ಸಮಾನತೆಯ ತತ್ವವನ್ನು ಪ್ರತಿಪಾದಿಸುತ್ತವೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಹೊನ್ನೇಗೌಡ ಮಾತನಾಡಿ, ಭಾರತ ಸಂವಿಧಾನದಲ್ಲಿಯೂ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖವಿರುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಮಾನವನ ಸಂತೋಷದ ಜೀವನಕ್ಕೆ ಮಾನವ ಹಕ್ಕುಗಳು ತುಂಬಾ ಅತ್ಯಾವಶ್ಯಕ. ಆದರೂ ಹಿಂಸೆ, ಬಲತ್ಕಾರ, ದೌರ್ಜನ್ಯ, ದಬ್ಬಾಳಿಕೆ ಮೊದಲಾದವುಗಳ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ಕಾಣಬಹುದಾಗಿದೆ. ಇಂತಹ ಉಲ್ಲಂಘನೆಯನ್ನು ತಡೆಗಟ್ಟಬೇಕಾದರೆ ಮಾನವ ಹಕ್ಕುಗಳ ಬಗ್ಗೆ ಸರಿಯಾದ ತಿಳುವಳಿಕೆ ಅಗತ್ಯ. ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಕರ್ನಾಟಕದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನುಸ್ಥಾಪಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ಎಸ್. ಪರಶಿವ ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿ ನಿಖಿಲ್ ವಂದಿಸಿದರು.