ಜಿಲ್ಲೆಯಲ್ಲಿ ರಸ್ತೆ ಬದಿ ಹಾಗೂ ಸರ್ಕಾರಿ ಕಚೇರಿ ಆವರಣಗಳ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಜಿಲ್ಲೆಯಾದ್ಯಂತ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ರಸ್ತೆ ಬದಿ ಹಾಗೂ ಸರ್ಕಾರಿ ಕಚೇರಿ ಆವರಣಗಳ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಜಿಲ್ಲೆಯಾದ್ಯಂತ ಅರಣ್ಯೀಕರಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ನಗರದ ಹೊರವಲಯದಲ್ಲಿರುವ ಬೀದರ್‌ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಬರುವ ‘ದೇವ-ದೇವ ವನ''''''''''''''''ಕ್ಕೆ ಭೇಟಿ ನೀಡಿದ ಸಚಿವರು, ಇಲ್ಲಿನ ಬೃಹತ್‌ ಪಂಚವಟಿ, ಜಪಾನೀಸ್‌ ಗಾರ್ಡನ್‌, ಶಿವ ಪಂಚಾಯತಿ ವನ, ರಾಶಿ ವನ, ನವನಿಕೇತನ ವನ, ನಂದನ ವನ, ನವಗ್ರಹ ವನ ಹಾಗೂ ನಂದಿನಿ ವನಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಪ್ರಾಣಿ ಪಕ್ಷಿ ಸಂಕುಲಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ಹಳ್ಳದಕೇರಿ ಟ್ರೀ ಪಾರ್ಕ್ ಹಾಗೂ ಪ್ಲಾಂಟೇಷನ್‌ಗೆ ಭೇಟಿ ನೀಡಿ, ವಿವಿಧ ಬಗೆಯ ಗಿಡಮರಗಳನ್ನು ಬೆಳೆಸುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ನೆಟ್ಟಿರುವ ಗಿಡ ಮರಗಳ ಸುರಕ್ಷತೆ ಹಾಗೂ ಅವುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಗಿಡ ನೆಡುವ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ರಸ್ತೆಬದಿ ನೆಟ್ಟ ಸಸಿಗಳಿಗೆ ನೀರುಣಿಸಲು ಮತ್ತು ಅವುಗಳ ಸೂಕ್ತ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಪ್ರಕೃತಿಯನ್ನು ರಕ್ಷಿಸಿದರೆ ಮಾತ್ರ ನಮಗೆ ಉತ್ತಮ ಭವಿಷ್ಯ ಸಿಗಲು ಸಾಧ್ಯ ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರತಿಪಾದಿಸಿದರು.