ಕೊಪ್ಪಳ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕೊಪ್ಪಳ: ಶಾಲಾ-ಕಾಲೇಜುಗಳಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಬೇಕು. ಪಠ್ಯವು ಜ್ಞಾನದ ದಾರಿಯಾದರೆ, ಪಠ್ಯೇತರ ಚಟುವಟಿಕೆ ಬದುಕಿಗೆ ದಾರಿದೀಪವಾಗಬಲ್ಲವು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೊಪ್ಪಳ ಸುತ್ತಮುತ್ತ ಸುಮಾರು 202 ಕೈಗಾರಿಕೆಗಳು ತಲೆ ಎತ್ತಿದ್ದು, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಪರಿಸರ ಸಂರಕ್ಷಣೆಯ ಹೋರಾಟ ಅ. 30ರಂದು ವರ್ಷ ಪೂರೈಸಲಿದ್ದು, ಇದು ಸರ್ಕಾರದ ವಿರುದ್ಧವಲ್ಲ, ಯುವಪೀಳಿಗೆಯ ಉಳಿವಿಗಾಗಿ ನಡೆಯುತ್ತಿರುವ ಹೋರಾಟ. ವಿದ್ಯಾರ್ಥಿಗಳು ಇಂತಹ ಹೋರಾಟಗಳಿಗೆ ಬಲ ತುಂಬಬೇಕು ಎಂದರು.ಪ್ರಾಚಾರ್ಯ ಡಾ. ಗಣಪತಿ ಕೆ. ಲಮಾಣಿ ಮಾತನಾಡಿ, ಕಾಲೇಜು ಅಭಿವೃದ್ಧಿ ಹೊಂದುತ್ತಿದ್ದು, ನುರಿತ ಅಧ್ಯಾಪಕರ ಪರಿಣಾಮಕಾರಿ ಬೋಧನೆಯಿಂದ ಉತ್ತಮ ಫಲಿತಾಂಶ ಪಡೆಯುತ್ತಿದೆ. ವಿದ್ಯಾರ್ಥಿನಿಯರು ಕಾಲೇಜಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಸಹಶಿಕ್ಷಕ ಮೆಹಬೂಬ್ ಅಲಿ ಕೆ.ಎಂ. ಮಾತನಾಡಿ, ಗುರಿ, ಸಮಯ ಪ್ರಜ್ಞೆ, ಸ್ಪರ್ಧಾ ಮನೋಭಾವ, ಶ್ರದ್ಧೆ ಹಾಗೂ ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು ಎಂದರು. ಶಿಕ್ಷಣಪ್ರೇಮಿ ಬಿ.ಜಿ. ಕರಿಗಾರ ಮಾತನಾಡಿದರು. ಲಲಿತಾ ಎನ್.ಕೆ. ಪ್ರಾಸ್ತಾವಿಕ ಮಾತನಾಡಿದರು.ಡಾ. ಶುಭಾ, ಡಾ. ವಿಠೋಬ ಎಸ್., ಡಾ. ಮಲ್ಲಿಕಾರ್ಜುನ ಬಿ., ಶುಭಾ ಟಿ.ಇ., ಸುಮಿತ್ರಾ ಎಸ್.ವಿ., ಸುಮಯ್ಯ ಕೆ., ಅಲ್ಲಾಭಕ್ಷ, ಬಸವರಾಜ ಕರುಗಲ್, ಡಾ. ಗವಿಸಿದ್ದಪ್ಪ ಮುತ್ತಾಳ, ಡಾ. ಹುಲಿಗೆಮ್ಮ, ಡಾ. ನರಸಿಂಹ, ಡಾ. ಪ್ರದೀಪಕುಮಾರ್ ಉಪಸ್ಥಿತರಿದ್ದರು. ನಾಗರತ್ನಾ, ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಐಶ್ವರ್ಯಾ, ಲಕ್ಷ್ಮೀ ಸ್ವಾಗತಿಸಿದರು. ಮಧುಮತಿ ವಂದಿಸಿದರು.