ದೊಡ್ಡಬಳ್ಳಾಪುರ: ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಮೃದುಕೌಶಲ ಮತ್ತು ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ಕಲರವ-2026 ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಇಂದು ಗಣನೀಯ ಬದಲಾವಣೆಗಳಾಗುತ್ತಿದ್ದು, ಉದ್ಯೋಗ ಕೌಶಲ್ಯಗಳನ್ನು ಹೇಳಿಕೊಡುವುದು ಅಗತ್ಯವಾಗಿದೆ. ದೊಡ್ಡಬಳ್ಳಾಪುರ ಸುತ್ತಮುತ್ತ ಬೆಳೆಯುತ್ತಿರುವ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸ್ಥಳೀಯರಿಗೆ ಲಭ್ಯವಿದ್ದು, ಪದವಿ ಪ್ರಮಾಣ ಪತ್ರಗಳೊಂದಿಗೆ ಪರಿಣಾಮಕಾರಿ ಉದ್ಯೋಗ ಕೌಶಲ್ಯದ ಬಗ್ಗೆ ಜಾಗೃತಿ ಮತ್ತು ಪರಿಣಿತಿ ಹೊಂದುವುದು ಅಗತ್ಯ ಎಂದರು.ತಾಂತ್ರಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಯಮನಪ್ಪ ಎನ್.ದೊಡ್ಡಮನಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಧನೆಯ ಹಂಬಲ ಹೆಚ್ಚಿರುತ್ತದೆ. ಅದಕ್ಕೆ ಪೂರಕವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಸಾಧನೆ ಸುಲಭವಾಗುತ್ತದೆ. ಪದವೀಧರರಾಗುವ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಶಿಕ್ಷಣದ ಮುಖ್ಯ ಉದ್ದೇಶ ಈಡೇರುತ್ತದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದರು.
ಎಕ್ಸೆಲ್ ಲೀಡರ್‌ಶಿಪ್ ಅಕಾಡೆಮಿಯ ಡಾ.ಎಸ್.ನಾಗರಾಜರಾವ್ ಮಾತನಾಡಿ, ತಮ್ಮ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಇರುವ ಎಲ್ಲ ಅವಕಾಶಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಕೀಳರಿಮೆ ತೊರೆದು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬೇಕು. ಮೃದು ಕೌಶಲಗಳನ್ನು ರೂಢಿಸಿಕೊಳ್ಳುವ ಮೂಲಕ ಶಿಸ್ತಿನ ಬದುಕಿಗೆ ಒತ್ತು ನೀಡಿದಾಗ ಸಾಧನೆ ಸಾಧ್ಯ. ಇದರಿಂದ ಅಗತ್ಯ ಗೌರವ ಮತ್ತು ಮನ್ನಣೆಯನ್ನು ಸಮಾಜ ನೀಡುತ್ತದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಮುಖ್ಯ ಅಡಳಿತಾಧಿಕಾರಿ ಬಿ.ಕೃಷ್ಣಪ್ಪ, ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಆರ್‌ಎಲ್‌ಜೆಐಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಗುರುದೇವ್ ಮತ್ತಿತರರು ಭಾಗವಹಿಸಿದ್ದರು.
9ಕೆಡಿಬಿಪಿ2-
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್‌ನ ಕಲರವ-2026 ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಹನುಮಂತರಾಜು, ಮುಖ್ಯ ಅಡಳಿತಾಧಿಕಾರಿ ಬಿ.ಕೃಷ್ಣಪ್ಪ, ಪ್ರಾಂಶುಪಾಲ ಡಾ.ನರಸಿಂಹರೆಡ್ಡಿ, ಆರ್‌ಎಲ್‌ಜೆಐಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ ಇತರರಿದ್ದರು.