ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ನಾಗರಿಕರು ಒಕ್ಕೊರಲಿನಿಂದ ಆಗ್ರಹಿಸಿದರು.

ನಗರದ ಮಹಾನಗರ ಪಾಲಿಕೆ ಸಭಾಭವನದಲ್ಲಿ ಮಂಗಳವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಾಲಿ ಹಾಗೂ ಮಾಜಿ ನಗರಸೇವಕರು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಕೈಗಾರಿಕೋದ್ಯಮಿಗಳು ಹಾಗೂ ಹಿರಿಯ ನಾಗರಿಕರು ತಮ್ಮ ಬೇಡಿಕೆಗಳ ಕುರಿತು ಹಕ್ಕೊತ್ತಾಯ ಮಂಡಿಸಿದರು. ಅರ್ಧಕ್ಕೆ ನಿಂತಿರುವ ಮಹಾನಗರ ಪಾಲಿಕೆ ವಾಣಿಜ್ಯ ಕಟ್ಟಡಗಳನ್ನು ಪೂರ್ಣಗೊಳಿಸಿ ಆದಾಯ ವೃದ್ಧಿಸಬೇಕು. ಕೈಗಾರಿಕಾ ಪ್ರದೇಶಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕು. ನಗರದಲ್ಲಿನ ರಸ್ತೆ, ಸ್ಮಶಾನಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಮೇಯರ್ ವಿಜಯ ಮೊರೆ ಮಾತನಾಡಿ, ಸದಾಶಿವನಗರದ ಸ್ಮಶಾನ ಸೇರಿದಂತೆ ವಿವಿಧ ಸಮುದಾಯಗಳ ರುದ್ರಭೂಮಿಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅಗತ್ಯ ಸ್ಥಳಾವಕಾಶ ಕಲ್ಪಿಸುವ ಕ್ರಮ ಕೈಗೊಳ್ಳಬೇಕು ಎಂದರು.ನಗರಸೇವಕ ಗಿರೀಶ ಧೋಂಗಡಿ ಮಾತನಾಡಿ, ಪಾಲಿಕೆಯ ಪ್ರಮುಖ ಆದಾಯ ಮೂಲವಾದ ತೆರಿಗೆ ಸಂಗ್ರಹವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಒಳಚರಂಡಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದರ ಜೊತೆಗೆ ನಗರದೆಲ್ಲೆಡೆ ಸಸಿಗಳನ್ನು ನೆಟ್ಟು ಪರಿಸರ ಸುಧಾರಣೆಗೆ ವಿಶೇಷ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.ಕನ್ನಡ ಹೋರಾಟಗಾರ ಮೆಹಬೂಬ ಮಕಾನದಾರ ಮಾತನಾಡಿ, ಪಾಲಿಕೆ ಒಡೆತನದಲ್ಲಿರುವ ಕೆಲ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾರ್ಯಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಕೂಡಲೇ ಅವುಗಳನ್ನು ಪೂರ್ಣಗೊಳಿಸಿ ಬಾಡಿಗೆಗೆ ನೀಡುವ ಮೂಲಕ ಪಾಲಿಕೆಯ ಆದಾಯವನ್ನು ಹೆಚ್ಚಿಸಬೇಕು. ನಗರದಲ್ಲಿ ವ್ಯವಸ್ಥಿತ ಕಸ ಸಂಗ್ರಹಕ್ಕೆ ವಿಶಿಷ್ಟ ಯೋಜನೆ ಜಾರಿಗೆ ತಂದು ಮಾದರಿ ಕಾರ್ಯಕ್ಕೆ ಮಹಾನಗರ ಪಾಲಿಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಕೈಗಾರಿಕೋದ್ಯಮಿ ಪ್ರಭಾಕರ್ ಮಾತನಾಡಿ, ಕೈಗಾರಿಕಾ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹವನ್ನು ವ್ಯವಸ್ಥಿತವಾಗಿ ನಡೆಸುವ ಜೊತೆಗೆ ರಸ್ತೆ, ಚರಂಡಿ ಅಭಿವೃದ್ಧಿ ಹಾಗೂ ತ್ಯಾಜ್ಯ ಸಂಗ್ರಹಕ್ಕೆ ಸಮರ್ಪಕ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ಪ್ರದೇಶದ ಆಸ್ತಿಗಳಿಗೆ ಪಾಲಿಕೆಯಿಂದ ಇ-ಆಸ್ತಿ ಪ್ರಮಾಣಪತ್ರ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಜತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮೂಲಕ ಭದ್ರತೆ ಹೆಚ್ಚಿಸಬೇಕು ಎಂದರು.ಈ ವೇಳೆ ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ಜೋಶಿ, ಪಾಲಿಕೆ ಆಯುಕ್ತ ಕಾರ್ತಿಕ, ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮೊದಲಾದವರು ಉಪಸ್ಥಿತರಿದ್ದರು.