ಕುಡಿವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಿ

| Published : Nov 21 2023, 12:45 AM IST

ಸಾರಾಂಶ

ಜಿಲ್ಲೆಯ ಯಲ್ಲಾಪುರ, ಮುಂಡಗೋಡು, ದಾಂಡೇಲಿ, ಶಿರಸಿ, ಸಿದ್ದಾಪುರ ತಾಲೂಕುಗಳನ್ನು ಜಿಲ್ಲೆಯ ಅತಿ ಹೆಚ್ಚಿನ ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಕ್ಷಿಪ್ರಗತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಆದ್ಯತೆ ನೀಡಬೇಕು. ನೀರಿಲ್ಲದ ಸ್ಥಿತಿ ಬಂದೊದಗುವ ಮುನ್ನವೇ ನೀರಿನ ಸಂಪನ್ಮೂಲ ಕಂಡುಕೊಳ್ಳಬೇಕು ಎಂದು ಶಾಸಕ, ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷರೂ ಆದ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಯಲ್ಲಾಪುರ: ಜಿಲ್ಲೆಯ ಯಲ್ಲಾಪುರ, ಮುಂಡಗೋಡು, ದಾಂಡೇಲಿ, ಶಿರಸಿ, ಸಿದ್ದಾಪುರ ತಾಲೂಕುಗಳನ್ನು ಜಿಲ್ಲೆಯ ಅತಿ ಹೆಚ್ಚಿನ ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ, ಕ್ಷಿಪ್ರಗತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಆದ್ಯತೆ ನೀಡಬೇಕು. ನೀರಿಲ್ಲದ ಸ್ಥಿತಿ ಬಂದೊದಗುವ ಮುನ್ನವೇ ನೀರಿನ ಸಂಪನ್ಮೂಲ ಕಂಡುಕೊಳ್ಳಬೇಕು ಎಂದು ಶಾಸಕ, ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷರೂ ಆದ ಶಿವರಾಮ ಹೆಬ್ಬಾರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಅವರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬರಗಾಲ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಟಾಸ್ಕ್‌ಫೋರ್ಸ್‌ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿಗಾಗಿ ಪ್ರತಿ ತಹಸೀಲ್ದಾರಿಗೆ ಜಿಲ್ಲಾಧಿಕಾರಿಗಳು ₹೨೫ ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರತಿ ಪಿಡಿಒಗಳು ಸ್ಥಳೀಯ ಜನಪ್ರತಿನಿಧಿಗಳೊಡಗೂಡಿ ಪ್ರತಿ ಕಾಮಗಾರಿಯನ್ನು ನಿರ್ವಹಿಸಬೇಕು. ಕಳೆದ ೧೦ ವರ್ಷಗಳಿಂದ ಯಲ್ಲಾಪುರ ಪಟ್ಟಣದಲ್ಲಿ ಕೊಳವೆಬಾವಿ ನೀರಿನಿಂದಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಈ ವರೆಗೂ ಯಾವುದೇ ಸಮಸ್ಯೆ ಬಂದಿಲ್ಲ. ೩ ಜಾತ್ರೆಗಳನ್ನು ಕಳೆದಿದ್ದೇವೆ. ಅಂತೆಯೇ ಈಗಿನಿಂದಲೇ ಪ್ರತಿ ಪಂಚಾಯಿತಿಯ ನೀರಿನ ವ್ಯವಸ್ಥೆ ಗಮನಿಸಿ, ಸಿದ್ಧತೆ ಕೈಗೊಳ್ಳಬೇಕು. ಅದರಲ್ಲೂ ಕಿರವತ್ತಿ, ಮದನೂರು, ಹಾಸಣಗಿ, ಕುಂದರಗಿ ಪಂಚಾಯಿತಿಗಳಲ್ಲಿ ನೀರಿನ ಸಮಸ್ಯೆ ತೀವೃವಾಗಿದೆ. ಉಳಿದ ಪಂಚಾಯಿತಿಗಳ ನೀರಿನ ಸ್ಥಿತಿಗನುಗುಣವಾಗಿ ಹೆಚ್ಚಿನ ಗಮನ ನೀಡಬೇಕು ಎಂದರು. ಇಡಗುಂದಿ ಪಿಡಿಒ ಚನ್ನವೀರಪ್ಪ ಅವರ ಕುರಿತು, ನಿಮ್ಮ ಮೇಲೆ ಸಾರ್ವಜನಿಕರ ಸಾಕಷ್ಟು ದೂರುಗಳಿವೆ ಎಂದು ತರಾಟೆಗೆ ತೆಗೆದುಕೊಂಡ ಹೆಬ್ಬಾರ, ಯಾವುದೇ ಅಧಿಕಾರಿಗಳು ಪ್ರತಿಯೊಂದಕ್ಕೂ ಕಾನೂನಿನ ಪುಸ್ತಕ ತೋರಿಸಿ ಜನರಿಗೆ ಕಿರಿಕಿರಿ ಉಂಟುಮಾಡುವುದಲ್ಲ; ಮಾನವೀಯತೆ ಆಧಾರದ ಮೇಲೆ ಜನರಿಗೆ ಸಹಾಯ ಮಾಡಬೇಕು ಎಂದು ಖಡಕ್ಕಾಗಿಯೇ ಎಚ್ಚರಿಸಿದರು. ಜಿಲ್ಲೆಯಲ್ಲೇ ಬರಗಾಲದ ಸ್ಥಿತಿಗೆ ಉತ್ತಮ ಕಾರ್ಯಮಾಡಿ ಮೊದಲ ಸ್ಥಾನದಲ್ಲಿರಬೇಕು. ಯಾವುದೇ ಕಾರಣಕ್ಕೂ ನಿರಂತರ ಮೊಬೈಲ್ ಸಂಪರ್ಕದಲ್ಲಿದ್ದು, ಕೇಂದ್ರಸ್ಥಳದಲ್ಲಿ ಲಭ್ಯರಿದ್ದು, ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ನಿರ್ದೇಶಿಸಿದರು.

ರೈತರಿಗೆ ಸರಿಯಾದ ಪರಿಹಾರ ದೊರೆಯುವಂತೆ ಮಾಡುವುದು, ಕುಡಿಯುವ ನೀರಿನ ವ್ಯವಸ್ಥೆ, ಬೆಳೆವಿಮೆ, ಎಲೆಚುಕ್ಕೆ ರೋಗ, ಅಡಕೆಗೂ ವಿಮೆ ಹೀಗೆ ಇಂತಹ ಎಲ್ಲ ಸಮಸ್ಯೆಗಳಿಗೆ ರೈತರಿಗೆ ನ್ಯಾಯ ದೊರೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಖಾಸಗಿ ವಿಮಾ ಕಂಪನಿಗಳ ಜತೆ ಹೊಂದಾಣಿಕೆ ಮಾಡಿಕೊಳ್ಳದೇ ರೈತರಿಗೆ ನ್ಯಾಯ ದೊರಕಿಸುವ ಕೆಲಸ ಅಧಿಕಾರಿಗಳ ಹೊಣೆ ಎಂದರು. ಪಶುಗಳಿಗೆ ವಿವಿಧ ನಮೂನೆಯ ರೋಗಗಳು ಬಾಧಿಸುತ್ತಿವೆ. ಈ ಕುರಿತು ಗಂಭೀರವಾಗಿ ಪಶು ವೈದ್ಯಾಧಿಕಾರಿಗಳು ಗಮನ ಹರಿಸಬೇಕೆಂದು ಸೂಚಿಸಿದರು. ಪಶು ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ. ಸುಬ್ರಾಯ ಭಟ್ಟ ಮಾತನಾಡಿ, ಅಗತ್ಯವಾದ ಲಸಿಕೆ ನೀಡಲಾಗಿದೆ. ಕೆಲವು ಹೊಸ ರೋಗಗಳು ಕಾಣಿಸಿಕೊಂಡಿದ್ದು, ಅವುಗಳಿಗೆ ಔಷಧಿ ಲಭ್ಯವಿಲ್ಲ. ಆದರೂ ನಮ್ಮಿಂದಾಗಬಹುದಾದ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಕೃಷಿ, ತೋಟಗಾರಿಕಾ ಇಲಾಖೆಗಳು ಕೇಂದ್ರ-ರಾಜ್ಯ ಸರ್ಕಾರಗಳ ಬರಗಾಲ ಕಾಮಗಾರಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಕಾಮಗಾರಿಯ ಅವಕಾಶವನ್ನು ಪಡೆದಿದ್ದು, ಸಮರ್ಥವಾಗಿ ರೈತರಿಗೆ, ಜನಸಾಮಾನ್ಯರಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಬೇಕು ಎಂದರು.

ಶಿರಸಿ ಸಹಾಯಕ ಆಯುಕ್ತ ದೇವರಾಜ ಮಾತನಾಡಿ, ಎಲ್ಲ ಗ್ರಾಪಂಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ನೀರಿನ ವ್ಯವಸ್ಥೆಗನುಗುಣವಾಗಿ ನೀರನ್ನು ಬಳಸಬೇಕಲ್ಲದೇ ಅನಗತ್ಯವಾಗಿ ಚೆಲ್ಲಬಾರದು. ಪ್ರತಿಯೊಬ್ಬ ಪಿಡಿಒಗಳು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಥವಾಗಿ ಮಾಡಬೇಕು ಎಂದರು. ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ತಹಸೀಲ್ದಾರ್ ಎಂ. ಗುರುರಾಜ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಪಪಂ ಮುಖ್ಯಾಧಿಕಾರಿ ಸುನೀಲ್ ಗಾವಡೆ, ತಾಲೂಕಿನ ಎಲ್ಲ ಪಿಡಿಒ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.