ಧಾರ್ಮಿಕ ಆಚರಣೆಗಳು ನಮ್ಮ ಜೀವನದ ಮೌಲ್ಯಗಳನ್ನು ಬೆಳೆಸುತ್ತವೆ. ಇದರ ಜತೆಗೆ ಶಿಕ್ಷಣವನ್ನು ಸಮ ಸಮನಾಗಿ ತೆಗೆದುಕೊಂಡು ಹೋಗಬೇಕು.
ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಜಾತ್ರಾಮಹೋತ್ಸವ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಶಿರಹಟ್ಟಿ
ಧಾರ್ಮಿಕ ಆಚರಣೆಗಳು ನಮ್ಮ ಜೀವನದ ಮೌಲ್ಯಗಳನ್ನು ಬೆಳೆಸುತ್ತವೆ. ಇದರ ಜತೆಗೆ ಶಿಕ್ಷಣವನ್ನು ಸಮ ಸಮನಾಗಿ ತೆಗೆದುಕೊಂಡು ಹೋಗಬೇಕು. ಸಮಾಜದ ಪ್ರಗತಿಗೆ ಶಿಕ್ಷಣವೂ ಅತ್ಯಂತ ಅಗತ್ಯವಾಗಿದೆ. ಧಾರ್ಮಿಕತೆಯ ಜತೆಗೆ ಶಿಕ್ಷಣವನ್ನು ಕೊಂಡೊಯ್ಯುವ ಮೂಲಕ ಉತ್ತಮ ಹಾಗೂ ಜ್ಞಾನವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮುಜರಾಯಿ ಖಾತೆ ಸಚಿವ ಕೆ.ಎಸ್. ಬಸವಂತಪ್ಪ ಕರೆ ನೀಡಿದರು.ಸೋಮವಾರ ಸಂಜೆ ತಾಲೂಕಿನ ಛಬ್ಬಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿ ಜರುಗಿದ ಶ್ರೀ ದುರ್ಗಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಸಮಾಜದ ಅಭಿವೃದ್ಧಿಯಲ್ಲಿ ದೇವಸ್ಥಾನಗಳು, ಮಠ-ಮಾನ್ಯಗಳು ತಮ್ಮದೇ ಆದ ಮಹತ್ವ ಹೊಂದಿವೆ. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಮೌಲ್ಯಗಳನ್ನು ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಶಿಕ್ಷಣವು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಇಡೀ ಕುಟುಂಬ ಹಾಗೂ ಸಮಾಜದ ಭವಿಷ್ಯವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಜತೆಗೆ ಅವರಲ್ಲಿ ಮಾನವೀಯತೆ, ಶಿಸ್ತು, ಸೇವಾ ಮನೋಭಾವ ಮತ್ತು ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯ ಜತೆಗೆ ಅಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೂ ಉತ್ತೇಜನ ನೀಡುವ ಅಗತ್ಯವಿದೆ ಎಂದರು.ಈಗಾಗಲೇ ಕ್ಷೇತ್ರ ಶಾಸಕರಾದಿಯಾಗಿ ಮುಖಂಡರು ದೇವಸ್ಥಾನ ಹಾಗೂ ಮಠಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುವಂತೆ ಬೇಡಿಕೆ ಇಟ್ಟಿದ್ದು, ಹಂತ ಹಂತವಾಗಿ ಅನುದಾನ ನೀಡುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ತಾಲೂಕಿನಲ್ಲಿ ಎಲ್ಲ ಸಮುದಾಯಗಳ ದೇವಸ್ಥಾನಕ್ಕೆ ತಮ್ಮ ಖಾತೆಯಿಂದ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.ಸಾನಿಧ್ಯ ವಹಿಸಿದ್ದ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಜನರ ಸೇವೆ ಮಾಡಿದರೆ ಅಧಿಕಾರ ನಮ್ಮ ಹತ್ತಿರ ಬಂದು ನಿಲ್ಲುತ್ತದೆ ಎನ್ನುವುದಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ಸಾಕ್ಷಿ. ಇವರೊಬ್ಬ ಅಪರೂಪದ ರಾಜಕಾರಣಿ ಎಂದರು.
ಮೌನೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಆನಂದಸ್ವಾಮಿ ಗಡ್ಡದ್ದೇವಮಠ, ಗುರುನಾಥ ದಾನಪ್ಪನವರ, ಎಸ್.ಎನ್. ಬಳ್ಳಾರಿ, ಫಕ್ಕೀರೇಶ ಮ್ಯಾಟಣ್ಣವರ, ಡಿ.ಕೆ. ಹೊನ್ನಪ್ಪನವರ ಮಾತನಾಡಿದರು. ನಾಗರಾಜ ಪೋತರಾಜ, ಎಚ್.ಡಿ. ಮಾಗಡಿ, ಈರಯ್ಯ ಮಠಪತಿ, ಕೋಟೆಪ್ಪ ವರ್ದಿ, ಸುರೇಶ ನಂದೆಣ್ಣವರ, ಡಾ. ಪ್ರಕಾಶ ಹೊಸಮನಿ, ಜಾನು ಲಮಾಣಿ, ದೇವಪ್ಪ ಲಮಾಣಿ, ದುರಗಮ್ಮ ಮುಂದಿನಮನಿ, ಗೀತಮ್ಮ ಬೀರಣ್ಣವರ, ಸತೀಶ ಪಾಶಿ, ಎಮ್.ಎಚ್. ಮ್ಯಾಗೇರಿ, ರಾಮು ಅಡಗಿಮನಿ, ಮಾರ್ತಂಡಪ್ಪ ಹಾದಿಮನಿ, ಹನಂತಪ್ಪ ನಂದೆಣ್ಣವರ ಇತರರು ಇದ್ದರು.ಮುಖಂಡರು ತಬ್ಬಿಬ್ಬುರಾಜ್ಯದಲ್ಲಿ ಮುಜರಾಯಿ ಖಾತೆ ನಿರ್ವಹಿಸಿದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ನಂಬಿಕೆ ಇದೆ. ಈ ನಂಬಿಕೆಯನ್ನು ಹುಸಿಗೊಳಿಸಲು ಮುಂಬರುವ ಚುನಾವಣೆಯಲ್ಲಿ ನಾವೆಲ್ಲರೂ ಸರಳ, ಸಜ್ಜನಿಕೆ ರಾಜಕಾರಣಿ ಕೆ.ಎಸ್. ಬಸವಂತಪ್ಪ ಅವರ ಪರವಾಗಿ ಪ್ರಚಾರಕ್ಕೆ ಹೋಗೋಣ ಎಂಬ ಫಕೀರ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೆ ವೇದಿಕೆ ಮೇಲಿದ್ದ ಇತರ ಪಕ್ಷಗಳ ಮುಖಂಡರು ತಬ್ಬಿಬ್ಬಾದರು.