‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ’ ಎಂಬ ಗಾದೆ ಮಾತಿನಂತೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಗುಣ, ಶಿಸ್ತು ಹಾಗೂ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಜೀವನದಲ್ಲಿ ಕಲಿಯಲು ಶ್ರದ್ಧೆ ಮುಖ್ಯ. ಪೋಷಕರು, ಶಿಕ್ಷಕರು ಹಾಗೂ ಸಮಾಜದಿಂದ ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಕಲಿಯಬಹುದು. ಕೆಲವನ್ನು ನೋಡಿ, ಕೆಲವನ್ನು ಮಾಡಿ ಹಾಗೂ ಇನ್ನೂ ಕೆಲವನ್ನು ಕೇಳಿ ಕಲಿಯಬೇಕು. ಪ್ರತಿಯೊಂದು ಅನುಭವವೂ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಓದುವ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸಮಯ ವ್ಯರ್ಥ ಮಾಡದೆ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಿ ಗುರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಹಾಗೂ ಕೌಶಲ್ಯಾಧಾರಿತ ಜೀವನ ರೂಪಿಸಿಕೊಳ್ಳುವಂತೆ ಪದವಿಪೂರ್ವ ಕಾಲೇಜು ಶಿಕ್ಷಣ ಸಂಸ್ಥೆ ಉಪನಿರ್ದೇಶಕ ಕೆ. ಪಿ. ಗಂಗಾಧರ್ ಕರೆ ನೀಡಿದರು.ನಗರದ ಸಮೀಪ ಅರಸೀಕೆರೆ ರಸ್ತೆಯ ಬಿ. ಕಾಟೀಹಳ್ಳಿಯಲ್ಲಿರುವ ಶ್ರೀ ಕುವೆಂಪು ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಹೊಸ ವಿದ್ಯಾರ್ಥಿಗಳನ್ನು ಹಳೆಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸುವ ಸಂಪ್ರದಾಯವನ್ನು ಕಾಲೇಜುಗಳಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಅತ್ಯಂತ ಮಹತ್ವವಿದ್ದು, ‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ’ ಎಂಬ ಗಾದೆ ಮಾತಿನಂತೆ ಚಿಕ್ಕ ವಯಸ್ಸಿನಲ್ಲೇ ಉತ್ತಮ ಗುಣ, ಶಿಸ್ತು ಹಾಗೂ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಜೀವನದಲ್ಲಿ ಕಲಿಯಲು ಶ್ರದ್ಧೆ ಮುಖ್ಯ. ಪೋಷಕರು, ಶಿಕ್ಷಕರು ಹಾಗೂ ಸಮಾಜದಿಂದ ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಕಲಿಯಬಹುದು. ಕೆಲವನ್ನು ನೋಡಿ, ಕೆಲವನ್ನು ಮಾಡಿ ಹಾಗೂ ಇನ್ನೂ ಕೆಲವನ್ನು ಕೇಳಿ ಕಲಿಯಬೇಕು. ಪ್ರತಿಯೊಂದು ಅನುಭವವೂ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಹೆಚ್ಚು ಒಗ್ಗಿಕೊಂಡಿದ್ದು, ರೀಲ್ಸ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಜ್ಞಾನಕ್ಕೆ ಪೂರಕವಾಗಬಹುದಾದರೂ ಅವುಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದರು. ಮೊಬೈಲ್‌ನಿಂದ ಸಾಧ್ಯವಾದಷ್ಟು ದೂರವಿದ್ದು, ಓದು, ಕ್ರೀಡೆ, ಸೃಜನಶೀಲ ಚಟುವಟಿಕೆ ಹಾಗೂ ಉತ್ತಮ ಹವ್ಯಾಸಗಳಿಗೆ ಸಮಯ ಮೀಸಲಿಡಬೇಕು. ಮೊಬೈಲ್ ಬಳಕೆಯನ್ನು ನಿಯಂತ್ರಿಸಿದಷ್ಟೂ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಭವಿಷ್ಯ ಉತ್ತಮವಾಗಿರುತ್ತದೆ ಎಂದು ಕಿವಿಮಾತು ಹೇಳಿದರು. ದೇಶವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಇನ್ನೂ ಹಲವು ಕ್ರೀಡೆಗಳಲ್ಲಿ ವಿಶ್ವಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಯಾವುದೇಕ್ಷೇತ್ರದಲ್ಲಾದರೂ ಶ್ರದ್ಧೆ, ಸ್ಪಷ್ಟ ಗುರಿ ಹಾಗೂ ಅದನ್ನು ಸಾಧಿಸುವ ಛಲವಿದ್ದರೆ ಯಶಸ್ಸು ಖಚಿತ. ಆದ್ದರಿಂದ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ನಿರಂತರ ಪರಿಶ್ರಮದ ಮೂಲಕ ಸಾಧನೆಯತ್ತ ಸಾಗಬೇಕು ಎಂದರು. ಪಿಯುಸಿ ಶಿಕ್ಷಣದ ಹಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ಅವಧಿಯಲ್ಲಿ ಅನಗತ್ಯ ವಿಷಯಗಳಿಗೆ ಗಮನ ಹರಿಸದೆ ವಿದ್ಯಾಭ್ಯಾಸದತ್ತ ಸಂಪೂರ್ಣ ಗಮನ ನೀಡಿದರೆ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಬಿ.ಈ. ಶಿವರಾಮೇಗೌಡ ರವರು ಮಾತನಾಡುತ್ತಾ, ಒಂದು ಗುರಿಯನ್ನು ಸಾಧಿಸುವ ಛಲ, ಹಠ, ಆತ್ಮವಿಶ್ವಾಸವನ್ನು ರೂಪಿಸಿಕೊಳ್ಳಿ ಎಂದು ಎಂದರು. ಅನೇಕ ಸಾಧಕರ ಸಾಧನೆಗಳನ್ನು ವಿವರಿಸಿ ನೀವೂ ಕೂಡ ಜೀವನದಲ್ಲಿ ದೊಡ್ಡ ಸಾಧಕರಾಗಿ ಎಂದು ತಿಳಿಸಿದರು. ಶ್ರಮಪಟ್ಟು ಓದಿ ಒಳ್ಳೆ ವಿದ್ಯಾರ್ಥಿಗಳಾಗಿ, ತಂದೆ ತಾಯಿಗಳಿಗೆ ಒಳ್ಳೆ ಮಕ್ಕಳಾಗಿ ಜೀವನವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕುವೆಂಪು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ. ಈ. ಶಿವರಾಮೇಗೌಡ, ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.