ರಾಮನಗರ: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ವಿಪರೀತ ಮಾನಸಿಕ ಒತ್ತಡ, ಕುಟುಂಬ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಪ್ರಭಾವದಿಂದಾಗಿ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಅವುಗಳನ್ನು ತಡೆಗಟ್ಟಲು ಕಾಲೇಜುಗಳಲ್ಲಿ ಯುವ ಜನರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕೆ. ಕುಮಾರ್ ಅಭಿಪ್ರಾಯಪಟ್ಟರು
ರಾಮನಗರ: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ವಿಪರೀತ ಮಾನಸಿಕ ಒತ್ತಡ, ಕುಟುಂಬ ಸಮಸ್ಯೆಗಳು ಸೇರಿದಂತೆ ವಿವಿಧ ವಿಚಾರಗಳ ಪ್ರಭಾವದಿಂದಾಗಿ ಆತ್ಮಹತ್ಯೆಗಳು ಸಂಭವಿಸುತ್ತಿವೆ. ಅವುಗಳನ್ನು ತಡೆಗಟ್ಟಲು ಕಾಲೇಜುಗಳಲ್ಲಿ ಯುವ ಜನರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಕೆ. ಕುಮಾರ್ ಅಭಿಪ್ರಾಯಪಟ್ಟರು.
ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ವತಿಯಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆಗಟ್ಟುವ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಮಾನಸಿಕ ತೊಂದರೆ, ಆತಂಕ, ಖಿನ್ನತೆ ಅಥವಾ ವ್ಯಸನಕ್ಕೆ ಒಳಗಾದ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ಮನೋವಿಜ್ಞಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಬೇಕು. ದೇಹಕ್ಕೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಸೂಕ್ತ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಧೂಮಪಾನ, ಮದ್ಯಪಾನ ಹಾಗೂ ಮುಖ್ಯವಾಗಿ ಮಾದಕ ವ್ಯಸನಗಳು ಯುವಜನರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ವ್ಯಸನಕ್ಕೆ ಒಳಗಾದ ಕೆಲವರು ಕುಟುಂಬ ಸದಸ್ಯರಿಂದ ದೂರವಾಗುವುದಲ್ಲದೆ ತಮ್ಮ ವರ್ತನೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಸಾಧ್ಯತೆ ಹಾಗೂ ಇದರಿಂದ ಕುಟುಂಬದಲ್ಲಿ ಮಾನಸಿಕ ಸಮಸ್ಯೆಗಳು ಉಂಟಾಗಬಹುದು. ಅದೇ ರೀತಿ ರೈತರು ಬೆಳೆ ನಷ್ಟ ನಿರೀಕ್ಷಿತ ಆದಾಯ ದೊರೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಆರ್ಥಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಯಾವುದೇ ಮಾನಸಿಕ ಸಮಸ್ಯೆಗಳಿದ್ದಲ್ಲಿ ಟೆಲಿಮನಸ್ ಸಹಾಯವಾಣಿ ಸಂಖ್ಯೆ - 14416 ಗೆ ಸಂಪರ್ಕಿಸಿ ಆಪ್ತಸಮಾಲೋಚನೆ ಮೂಲಕ ಯುವಜನರು ವ್ಯಸನದಿಂದ ದೂರವಿರಿಸಲು ಪ್ರಯತ್ನಿಸುವಂತೆ ಸೂಚಿಸಿದರು.ಇಂದಿನ ಯುವಜನರಲ್ಲಿ ಆನ್‌ಲೈನ್ ಹಾಗೂ ಅಂತರಾಷ್ಟ್ರೀಯ ವಿಡಿಯೋ ಗೇಮ್‌ಗಳ ಅತಿಯಾದ ಬಳಕೆಯೂ ಆತಂಕಕಾರಿ ಬೆಳವಣಿಗೆಯಾಗಿದೆ. ಫ್ರೀ ಫೈರ್, ಪಬ್ಜಿ ಸೇರಿದಂತೆ ವಿವಿಧ ಆನ್‌ಲೈನ್ ಗೇಮ್‌ಗಳ ಮೇಲೆ ಅತಿಯಾಗಿ ಅವಲಂಭಿತರಾದರೆ ವಿದ್ಯಾಭ್ಯಾಸಕ್ಕೆ ಮತ್ತು ಕುಟುಂಬ ಸಂಬಂಧಗಳಿಗೆ ಹಾಗೂ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಗಮನಹರಿಸಿ ಅಗತ್ಯವಿದ್ದಲ್ಲಿ ತಜ್ಞರ ಸಲಹೆ ಪಡೆಯಬೇಕು ಎಂದು ಡಾ. ಕೆ. ಕುಮಾರ್ ಹೇಳಿದರು.
ಗೌಸಿಯಾ ಕಾಲೇಜ್ ಆಫ್ ಎಂಜಿನಿಯರಿಂಗ್ ಪ್ರಾಂಶುಪಾಲ ಡಾ. ಎನ್.ಎಸ್. ಕುಮಾರ್ ಮಾತನಾಡಿ, ಆತ್ಮಹತ್ಯೆಯ ಬಗ್ಗೆ ಸಮಾಜದಲ್ಲಿರುವ ದೃಷ್ಟಿಕೋನವನ್ನು ಬದಲಾಯಿಸುವ ಅಗತ್ಯವಿದೆ. ಯುವಕರು ಹಾಗೂ ಯುವತಿಯರು ಪರೀಕ್ಷೆ, ಕೌಟುಂಬಿಕ ವಿಚಾರಗಳು, ವೈಯಕ್ತಿಕ ಸಮಸ್ಯೆಗಳು ಸೇರಿದಂತೆ ವಿವಿಧ ತೊಂದರೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಇಂತಹ ಸಂದರ್ಭಗಳಲ್ಲಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಳ್ಳದೆ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ಜೀವನದಲ್ಲಿ ಸೋಲುಗಳು ಸಹಜ. ಐದು ಅಥವಾ ಹತ್ತು ಬಾರಿ ಸೋಲು ಕಂಡರೂ ಒಂದು ದಿನ ಗೆಲುವು ಖಂಡಿತವಾಗಿ ಸಿಗುತ್ತದೆ. ಆದ್ದರಿಂದ ಯಾವುದೇ ಕಷ್ಟದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಗೌಸಿಯ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮುಖ್ಯ ಆಡಳಿತಾಧಿಕಾರಿ ಪ್ರೊ.ಕೆ.ಆರ್.ಏಜಾಜ್ ಅಹಮದ್ , ಸಂಯೋಜಕರಾದ ಡಾ. ಸೈಫ್ ಉಲ್ಲಾಖಾನ್, ಮನೋವೈದ್ಯಕೀಯ ಸಮಾಜ ಕಾರ್ಯಕರ್ತರಾದ ಪದ್ಮರೇಖಾ, ರಾಘವೇಂದ್ರ, ಪವಿತ್ರ, ರಾಚವ್ವ, ಆಶಾ ಕಾರ್ಯಕರ್ತರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.10ಕೆ ಆರ್ ಎಂಎನ್ 1.ಜೆಪಿಜಿ
ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ತಡೆಗಟ್ಟುವ ಕುರಿತು ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.