ಕುಡಿಯುವ ನೀರಿನ ಕೊರತೆ ಕಂಡು ಬರುವ ಸಂದರ್ಭಗಳಲ್ಲಿ ಟ್ಯಾಂಕರ್ ನೀರು ಅಥವಾ ಖಾಸಗಿ ಬೋರ್‌ವೆಲ್ ಮೂಲಗಳಿಂದ, ಪೈಪ್‌ಲೈನ್ ಮೂಲಕ ನೀರು ಪೂರೈಸಲು ಮುಂಜಾಗ್ರತಾ ಯೋಜನೆ ಸಿದ್ಧಡಿಸಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡುಬರುವ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡುವ ಬದಲು, ಶಾಶ್ವತ ನೀರು ಪೂರೈಕೆ ಕ್ರಮ ಕೈಗೊಳ್ಳಲು ಹೆಚ್ಚಿನ ಆದ್ಯತೆ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ದಿಲೀಷ್ ಶಶಿ ನಿರ್ದೇಶನ ನೀಡಿದರು.

ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿನ ಕೊರತೆ ಕಂಡು ಬರುವ ಸಂದರ್ಭಗಳಲ್ಲಿ ಟ್ಯಾಂಕರ್ ನೀರು ಅಥವಾ ಖಾಸಗಿ ಬೋರ್‌ವೆಲ್ ಮೂಲಗಳಿಂದ, ಪೈಪ್‌ಲೈನ್ ಮೂಲಕ ನೀರು ಪೂರೈಸಲು ಮುಂಜಾಗ್ರತಾ ಯೋಜನೆ ಸಿದ್ಧಡಿಸುವಂತೆ ಸೂಚಿಸಿದ ಅವರು, ಬೇಸಿಗೆಯಲ್ಲಿ ಹಳಿಯಾಳ, ಮುಂಡಗೋಡ ಮತ್ತು ಕರಾವಳಿ ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದೆ. ಕರಾವಳಿ ಭಾಗಗಳಲ್ಲಿ ಉಪ್ಪು ನೀರು ಬರುವ ಸಮಸ್ಯೆಯಿರುತ್ತದೆ. ಸ್ಥಳೀಯವಾಗಿ ನೀರು ಲಭ್ಯವಿಲ್ಲದಿದ್ದರೆ, ದೂರದ ಮೂಲಗಳಿಂದ ಹೊಸ ಪೈಪ್‌ಲೈನ್ ವಿಸ್ತರಣೆ ಮಾಡಲು ಯೋಜನೆ ರೂಪಿಸಬೇಕು ಎಂದರು.

ಮಳೆಯ ಕಾರಣದಿಂದಾಗಿ ಕೆಲವು ಪೈಪ್‌ಲೈನ್ ಕಾಮಗಾರಿಗಳು ಹಾಗೂ ಬೋರ್‌ವೆಲ್ ಕಾಮಗಾರಿಗಳು ವಿಳಂಬವಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ಮುಂದಿನ ವಾರದಿಂದ ಕಾಮಗಾರಿಗಳನ್ನು ವೇಗಗೊಳಿಸಬೇಕು ಹಾಗೂ ಜಿಯೋ-ಟ್ಯಾಗಿಂಗ್, ಬೋರ್‌ವೆಲ್ ಸ್ಥಳ ಗುರುತಿಸುವಿಕೆ ಮತ್ತು ಫೋಟೋ ಅಪ್‌ಲೋಡ್ ಮಾಡುವ ಜವಾಬ್ದಾರಿಯನ್ನು ಕಾಮಗಾರಿ ಅನುಷ್ಠಾನ ಏಜೆನ್ಸಿಗಳು ಸರಿಯಾಗಿ ನಿರ್ವಹಿಸಬೇಕು. ಗ್ರಾಪಂ ಮತ್ತು ಪಿಡಿಒಗಳಿಗೆ ಮಾಹಿತಿ ನೀಡದೆ ಯಾವುದೇ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಬಾರದು ಹಾಗೂ ಕಾಮಗಾರಿ ಪೂರ್ಣಗೊಂಡು ಫೋಟೋ ಹಾಗೂ ದಾಖಲೆಗಳು ಸರಿಯಿದ್ದಲ್ಲಿ ಮಾತ್ರ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿ ಮಾಡಬೇಕು ಎಂದರು.

ಕುಡಿಯುವ ನೀರು ಪೂರೈಕೆಯಾಗಿ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ನೀಡಿರುವುದರಿಂದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅವಕಾಶವಿದ್ದು, ಪ್ರತಿ ತಾಲ್ಲೂಕಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಗುರುತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಎಂ.ಎಸ್. ಅಲ್ಲಾಬಕ್ಷ್, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಇದ್ದರು.