ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ: ಪವನ

| Published : Mar 10 2024, 01:46 AM IST

ಸಾರಾಂಶ

ಹುಕ್ಕೇರಿ ತಾಲೂಕು ಅಮ್ಮಣಗಿಯಲ್ಲಿ ಸರಕಾರಿ ಪ್ರೌಢಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಪವನ ಕತ್ತಿ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕ್ಷೇತ್ರದ ಶೈಕ್ಷಣಿಕ ಪ್ರಗತಿಗೆ ಕೋಟ್ಯಂತರ ರು.ಗಳನ್ನು ವ್ಯಯಿಸಲಾಗಿದ್ದು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವತ್ತ ವಿಶೇಷ ಕಾಳಜಿ ವಹಿಸಬೇಕು ಎಂದು ಎಪಿಎಂಸಿ ನಿರ್ದೇಶಕರೂ ಆದ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ತಾಲೂಕಿನ ಅಮ್ಮಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾದ ₹1.60 ಕೋಟಿ ವೆಚ್ಚದ 10 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಗುಣಮಟ್ಟದ ಕಟ್ಟಡ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಸತತ ಅಧ್ಯಯನ, ಸ್ಪಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನ ಮೂಲಕ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶೈಕ್ಷಣಿಕ ಕೇಂದ್ರಗಳಿಗೆ ಬೇಕಾದ ಎಲ್ಲ ಸಹಾಯ, ಸಹಕಾರ ನೀಡಲು ಕತ್ತಿ ಕುಟುಂಬ ಸದಾಕಾಲ ಸಿದ್ಧವಿದೆ ಎಂದು ಅವರು ಹೇಳಿದರು.

ನೇರ್ಲಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದು ಅವರಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನಡೆಯಿತು. ತಾಪಂ ಮಾಜಿ ಸದಸ್ಯೆ ಚಂದ್ರವ್ವಾ ಮಗದುಮ್ಮ ಅವರು ಶಾಲಾ ಅಭಿವೃದ್ಧಿಗೆ 10 ಸಾವಿರ ರೂ ದೇಣಿಗೆ ನೀಡಿದರು.

ಈ ವೇಳೆ ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಇಂಜನೀಯರ್ ವಿಜಯ ಖೋರಾಗಡೆ, ಗುತ್ತಿಗೆದಾರರಾದ ಮಲ್ಲಪ್ಪಾ ಅಂಕಲೆ, ವೀರುಪಾಕ್ಷಿ ಚೌಗಲಾ, ಬಿಇಒ ಪ್ರಭಾವತಿ ಪಾಟೀಲ, ಪ್ರೀತಮ್ ನಿಡಸೋಸಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತವ್ವಾ ನಾಗನೂರಿ, ಸದಸ್ಯ ಶಿವಶಂಕರ ಹುದ್ದಾರ, ಪಿಕೆಪಿಎಸ್ ಅಧ್ಯಕ್ಷ ಸುರೇಶ ಕುಲಕರ್ಣಿ, ಮುಖಂಡರಾದ ಪ್ರಶಾಂತ ಪಾಟೀಲ, ಬಾಳಾಸಾಹೇಬ ಜಾಧವ, ದಸ್ತಗೀರ ನದಾಫ, ತಾತ್ಯಾಸಾಹೇಬ ಜಾಧವ, ಅನೀಲ ಮಾಳಗೆ ಮತ್ತಿತರರು ಇದ್ದರು. ವನಿತಾ ದರೂರ ನಿರೂಪಿಸಿದರು. ಮುಖ್ಯ ಶಿಕ್ಷಕ ಎಸ್.ಡಿ.ನಾಯಿಕ ಸ್ವಾಗತಿಸಿ ವಂದಿಸಿದರು.