ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

| Published : Jan 05 2025, 01:31 AM IST

ಸಾರಾಂಶ

ಈಗಾಗಲೆ ಲಕ್ಷ್ಮೇಶ್ವರ ಗದಗ ಪ್ರಮುಖ ರಸ್ತೆಯಲ್ಲಿ ಆಗಬೇಕಾಗಿರುವ ದುರಸ್ಥಿ ಕಾಮಗಾರಿಗೆ ಒಟ್ಟು ₹೮ ಕೋಟಿ ಅನುದಾನ ಮಂಜೂರಿಯಾಗಿದ್ದು ಇಷ್ಟರಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ.

ಲಕ್ಷ್ಮೇಶ್ವರ: ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳ ಬಗ್ಗೆ ಬೇಡಿಕೆ ಇದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವದು, ಅಲ್ಲದೆ ಯಾವುದೇ ಕಾಮಗಾರಿಗಳು ನಡೆದರೂ ಸಹ ಅವುಗಳ ಗುಣಮಟ್ಟಕ್ಕೆ ಆದ್ಯತೆ ನೀಡಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ತಾಲೂಕಿನ ಪು.ಬಡ್ನಿ ವ್ಯಾಪ್ತಿಯ ಲಕ್ಷ್ಮೇಶ್ವರ-ದೇವಿಹಾಳ ಜಿಲ್ಲಾ ಮುಖ್ಯ ರಸ್ತೆಯ ಕಿಮೀ ೮.೭೦ರಲ್ಲಿರುವ ಸೇತುವೆ ದುರಸ್ಥಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಭಾಗದ ಮುಖ್ಯ ರಸ್ತೆಯಲ್ಲಿರುವ ಸೇತುವೆ ಮಳೆಯಿಂದ ಹದಗೆಟ್ಟು ಹೋಗಿದ್ದು ಇದರ ಹಾಗೂ ಈ ರಸ್ತೆ ಸುಧಾರಣೆಗೆ ಬೇಡಿಕೆ ಇತ್ತು, ಇದೀಗ ಈ ಕಾಮಗಾರಿಗೆ ₹೮೫ ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸುತ್ತಿದ್ದು, ಇದರ ಸಂಪೂರ್ಣ ದುರಸ್ಥಿಗೆ ಹೆಚ್ಚಿನ ಹಣಕಾಸಿನ ಅವಶ್ಯಕತೆ ಇದ್ದು ಮುಂದಿನ ದಿನಗಳಲ್ಲಿ ಸರ್ಕಾರ ಅನುದಾನ ನೀಡಿದಲ್ಲಿ ಅದನ್ನು ಸಹ ಈಡೇರಿಸುತ್ತೇವೆ.ಈಗಾಗಲೆ ಲಕ್ಷ್ಮೇಶ್ವರ ಗದಗ ಪ್ರಮುಖ ರಸ್ತೆಯಲ್ಲಿ ಆಗಬೇಕಾಗಿರುವ ದುರಸ್ಥಿ ಕಾಮಗಾರಿಗೆ ಒಟ್ಟು ₹೮ ಕೋಟಿ ಅನುದಾನ ಮಂಜೂರಿಯಾಗಿದ್ದು ಇಷ್ಟರಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ತೊಳಲಿ ರಸ್ತೆಗೆ ೧ ಕೋಟಿ ಮಂಜೂರಿಯಾಗಿದ್ದು ಅದನ್ನು ಸಹ ಪ್ರಾರಂಭಿಸಲಾಗುವದು. ಬೆಳಗಾವಿ ಅಧಿವೇಶನದಲ್ಲಿ ನೂತನ ತಾಲೂಕು ಕೇಂದ್ರಕ್ಕೆ ಅವಶ್ಯಕ ಕಚೇರಿಗಳಿಗಾಗಿ ಪ್ರಜಾಸೌಧಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕು ಮಿನಿ ವಿಧಾನಸೌಧಕ್ಕಾಗಿ ₹೮.೬೦ ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಪಟ್ಟಣದ ದೊಡ್ಡೂರು ರಸ್ತೆಯಲ್ಲಿನ ಜಾಗೆ ಗುರುತಿಸಲಾಗಿದ್ದು ಅದರ ಕಾಮಗಾರಿ ಸಹ ಪ್ರಾರಂಭಿಸಲಾಗುವದು, ಹೀಗೆ ಹತ್ತು ಹಲವಾರು ಕಾಮಗಾರಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಹೈಸ್ಕೂಲ್, ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣಕ್ಕೆ ₹೯೦ಲಕ್ಷಗಳ ಟೆಂಡರ್ ಸಹ ಆಗಿದ್ದು ಇವುಗಳು ಸಹ ಇಷ್ಟರಲ್ಲಿಯೇ ಪ್ರಾರಂಭಿಸಲಾಗುವದು ಎಂದು ಹೇಳಿದರು.

ಅಲ್ಲದೆ ಶಿರಹಟ್ಟಿಯಲ್ಲಿ ತಾಲೂಕಾಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದು, ಕ್ಷೇತ್ರ ಪ್ರಮುಖ ರಸ್ತೆಗಳ ಸುಧಾರಣೆ, ಲಕ್ಷ್ಮೇಶ್ವರ ತಾಲೂಕಾಸ್ಪತ್ರೆ ನಿರ್ಮಾಣಕ್ಕೂ ಬೇಡಿಕೆ ಇಡಲಾಗುವದು, ಕ್ಷೇತ್ರದಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಗುಣಮಟ್ಟದ ಕಾಮಗಾರಿಗಳಾಗಬೇಕು ಇದನ್ನು ಗುತ್ತಿಗೆದಾರರು ವಿಶೇಷ ಆಸಕ್ತಿಯಿಂದ ಕಾಮಗಾರಿ ನಡೆಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪು.ಬಡ್ನಿ ಗ್ರಾಪಂ ಅಧ್ಯಕ್ಷೆ ಪ್ರೇಮವ್ವ ಹರಿಜನ, ಮುಖಂಡರಾದ ಸುಭಾಸ ಬಟಗುರ್ಕಿ, ಶೇಖಣ್ಣ ಕರಿಯಣ್ಣವರ, ಅಶೋಕ ಬಟಗುರ್ಕಿ, ಪರಮೇಶರಪ್ಪ ಬಟಗುರ್ಕಿ, ವಾಗೀಶ ಬಟಗುರ್ಕಿ, ಮುತ್ತಣ್ಣ ಚೋಟಗಲ್, ಬಿ.ಬಿ.ಬಟಗುರ್ಕಿ, ಶಿವಾನಂದ ಹರಿಜನ, ಕಲ್ಲಪ್ಪ ಹಡಪದ, ಹೂಗಾರ, ಪರಮೇಶ್ವರಪ್ಪ ಚೋಟಗಲ್, ಅಶೋಕ ಮರಿಹೊಳಣ್ಣವರ, ಪ್ರಶಾಂತ ಹೊಸಮನಿ, ಕಿರಣ ಮಹಾಂತಶೆಟ್ಟರ, ರಾಜು ಚೋಟಗಲ್, ವಿಶಾಲ ಬಟಗುರ್ಕಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಲೋಕೋಪಯೋಗಿ ಇಲಾಖೆ ಎಇಇ ಫಕ್ಕೀರೇಶ, ಎಇ ಮಹೇಶ ಅಥಣಿ, ಪಿಡಿಓ ಬಿ.ಬಿ. ಬಳೂಟಗಿ ಸೇರಿದಂತೆ ಅನೇಕರು ಹಾಜರಿದ್ದರು.