ಸಾರಾಂಶ
ಸಂಡೂರು ತಾಲೂಕು ಗಣಿ ಪ್ರದೇಶವಾದ್ದರಿಂದ ಇಲ್ಲಿ ವಾಹನ ಚಲಾಯಿಸುವವರು ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಬೇಕು.
ಸಂಡೂರು: ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಬಳಿ ಸೋಮವಾರ ಜಿಲ್ಲಾ ಪೊಲೀಸ್, ಸಂಡೂರು ಠಾಣೆ ಹಾಗೂ ಸ್ಮಯೋರ್ ಸಂಸ್ಥೆಯ ಅಂಗಸಂಸ್ಥೆಯಾದ ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ೨೦೦೦ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.
ಹೆಲ್ಮೆಟ್‌ಗಳನ್ನು ವಿತರಿಸಿ ಮಾತನಾಡಿದ ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಹಿರ್ಜಿ ಎ. ಘೋರ್ಪಡೆ, ಸಂಡೂರು ತಾಲೂಕು ಗಣಿ ಪ್ರದೇಶವಾದ್ದರಿಂದ ಇಲ್ಲಿ ವಾಹನ ಚಲಾಯಿಸುವವರು ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಬೇಕು. ಪ್ರತಿಯೊಬ್ಬರ ಸುರಕ್ಷತೆ ಬಹಳ ಮುಖ್ಯ. ಜೀವನ ಅಮೂಲ್ಯವಾದದ್ದು, ಅದರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಯುವ ಜನತೆಯೂ ವಾಹನ ಓಡಿಸುವುದರ ಜತೆಗೆ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕಿದೆ. ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ೨೦೦೦ ಹೆಲ್ಮೆಟ್‌ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹಾಗೂ ಶಾಸಕ ಈ. ತುಕಾರಾಂ ಅವರು, ಉಚಿತವಾಗಿ ಹೆಲ್ಮೆಟ್‌ಗಳನ್ನು ನೀಡಿದ ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ಕಾರ್ಯವನ್ನು ಶ್ಲಾಘಿಸಿದರು.
ಲೋಹಗಿರಿ ಇಂಡಸ್ಟ್ರಿಯಲ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಏಕಾಂಬರ ಘೋರ್ಪಡೆ, ಸ್ಮಯೋರ್ ಸಂಸ್ಥೆಯ(ಗಣಿ) ನಿರ್ದೇಶಕರಾದ ಮಹಮ್ಮದ್ ಅಬ್ದುಲ್ ಸಲೀಂ, ತಹಸೀಲ್ದಾರ್ ಜಿ. ಅನಿಲ್‌ಕುಮಾರ್, ತಾಲೂಕು ಪಂಚಾಯಿತಿ ಇಒ ಎಚ್. ಷಡಾಕ್ಷರಯ್ಯ, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.