ಚಿತ್ರದುರ್ಗ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಗಳನ್ನು ಗ್ಯಾರಂಟಿ ಅಧ್ಯಕ್ಷ ಶಿವಣ್ಣ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕ್ರೀಡೆಗಳು ದೈಹಿಕ ವಿಕಾಸಕ್ಕೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮನವಿ ಮಾಡಿದರು.ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ, ಕೆಎಂಎಸ್ ಸ್ವತಂತ್ರ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಚಿತ್ರದುರ್ಗ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಎಷ್ಟು ಅಗತ್ಯವೋ, ದೈಹಿಕ ವಿಕಾಸಕ್ಕೆ ಕ್ರೀಡೆಗಳು ಅಷ್ಟೇ ಸಹಕಾರಿ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಕ್ರೀಡಾ ಮೀಸಲಾತಿಯ ಮಾನದಂಡಗಳ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಉದ್ಯೋಗ ಪಡೆಯುವ ಉತ್ತಮ ಅವಕಾಶಗಳು ಸಿಗಲಿವೆ. ಇದಕ್ಕಾಗಿಯೇ ಶಾಲಾ-ಕಾಲೇಜು ಮಟ್ಟದಲ್ಲೇ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸರಾಗವಾಗಿ ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ಕಲ್ಪಿಸಲಾಗಿದೆ. ಸ್ಥಳೀಯ ಮಟ್ಟದಲ್ಲೇ ಸೂಕ್ತ ವೇದಿಕೆ ನಿರ್ಮಿಸಿ ಶಿಕ್ಷಣ ಹಾಗೂ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದ್ದು, ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಾಪೂಜಿ ಸಮೂಹ ಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ಕೃಷ್ಣಪ್ಪ, ದಾವಣಗೆರೆ ವಿವಿ ವಿದ್ಯಾವಿಷಯಕ ಪರಿಷತ್ತಿನ ಸದಸ್ಯೆ ಡಾ.ಕೆ.ಮಂಜುಳ, ಕೆಎಂಎಸ್ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎನ್.ವೀರಪ್ಪ, ಕ್ರೀಡಾ ಸಂಚಾಲಕ ಎ.ಎಸ್.ರಂಗಪ್ಪ, ಕ್ರೀಡಾ ಕಾರ್ಯದರ್ಶಿ ಸಿ.ಪಿ.ಜ್ಞಾನದೇವ ಸೇರಿದಂತೆ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರು ಇದ್ದರು.