ಸಾರಾಂಶ
ಹಾನಗಲ್ಲ: ಗುಣಮಟ್ಟದ ಪಡಿತರ ಆಹಾರ ಪೂರೈಕೆಗೆ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಆಹಾರ ಜಾಗೃತಿ ಸಮಿತಿ ಕ್ರಿಯಾಶೀಲವಾಗಬೇಕು ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಹೇಳಿದರು.ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸ್ವಚ್ಛ ಮತ್ತು ಗುಣಮಟ್ಟದ ಆಹಾರ ವಿತರಣೆಗೆ ಆಹಾರ ಇಲಾಖೆ ಕ್ರಮ ವಹಿಸಬೇಕು ಎಂದರು.ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಮತ್ತು ಅಹವಾಲು ಸ್ವೀಕರಿಸಲು ಗ್ಯಾರಂಟಿ ಸಮಿತಿಗಳಿಗೆ ಪ್ರತಿ ಗ್ರಾ.ಪಂ ಪಿಡಿಒ ಸಹಕಾರ ನೀಡಬೇಕು ಎಂದರು.ಶಾಸಕರ ಮುತುವರ್ಜಿ ಕಾರಣಕ್ಕಾಗಿ ಹಾನಗಲ್ಲ ಸಾರಿಗೆ ಘಟಕಕ್ಕೆ ಹೊಸದಾಗಿ ೧೪ ಬಸ್ ಸೇರ್ಪಡೆಗೊಂಡಿವೆ. ಮತ್ತೆ ಎರಡು ಬಸ್‌ಗಳು ಸೇರ್ಪಡೆಗೊಳ್ಳಲಿವೆ ಎಂದರು.ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳ ಕುರಿತು ಮುಂದಿನ ದಿನಗಳಲ್ಲಿ ಇಲಾಖೆಗಳ ಸಭೆ ನಡೆಸಲಾಗುತ್ತದೆ ಎಂದು ವಿಜಯಕುಮಾರ ಹೇಳಿದರು.ತಾಲೂಕು ಸರಕಾರಿ ನೌಕರರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಗುರನಾಥ ಗವಾಣಿಕರ ಮತ್ತು ರಾಜ್ಯ ಸಮಿತಿಗೆ ಆಯ್ಕೆಗೊಂಡ ಪರಮೇಶ ಗಾಡಿಹುಚ್ಚಣ್ಣನವರ, ನಿರ್ದೇಶಕ ಬಸವರಾಜ ಕುಂಚೂರ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸಭೆಯಲ್ಲಿ ೪೨ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ತಾ.ಪಂ. ಮತ್ತು ಸಾರಿಗೆ ಘಟಕ, ಹೆಸ್ಕಾಂ, ಆಹಾರ ಇಲಾಖೆ, ಕೌಶಲಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.