ಕನ್ನಡದ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಜಿಲ್ಲೆ ಬಳ್ಳಾರಿ. ಕನ್ನಡ ನಾಡು, ನುಡಿ ಹಾಗೂ ಭಾಷಾ ಚಳವಳಿಗಳಲ್ಲಿ ಈ ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ.
ಬಳ್ಳಾರಿ: ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕೃತಿಯ ಸಂರಕ್ಷಣೆ ಕೇವಲ ಭಾಷಣಗಳಿಗೆ ಸೀಮಿತವಾಗದೆ, ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಕಾರ್ಯರೂಪಕ್ಕೆ ಬರಬೇಕು. ಗಡಿಭಾಗದ ಕನ್ನಡ ಶಾಲೆ ಉಳಿಸುವುದರ ಜತೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಅವಕಾಶ ಕಲ್ಪಿಸುವ ಮೂಲಕ ಕನ್ನಡದ ಅಸ್ಮಿತೆ ಬಲಪಡಿಸಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ಪ್ರತಿಪಾದಿಸಿದರು.
ನಗರದ ರಾಘವ ಕಲಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕನ್ನಡದ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಜಿಲ್ಲೆ ಬಳ್ಳಾರಿ. ಕನ್ನಡ ನಾಡು, ನುಡಿ ಹಾಗೂ ಭಾಷಾ ಚಳವಳಿಗಳಲ್ಲಿ ಈ ಜಿಲ್ಲೆಯ ಪಾತ್ರ ಮಹತ್ವದ್ದಾಗಿದೆ. ಆದರೆ, ಇಂದು ಗಡಿಭಾಗದ ಕನ್ನಡ ಶಾಲೆಗಳು ಮುಚ್ಚುವ ಅಂಚಿಗೆ ತಲುಪಿರುವುದು ಆತಂಕಕಾರಿ ಸಂಗತಿ. ವಿದ್ಯಾರ್ಥಿಗಳ ಸಂಖ್ಯೆ ಮಾನದಂಡವಾಗಿಟ್ಟುಕೊಂಡು ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಇಂತಹ ತೀರ್ಮಾನ ಕೈಬಿಟ್ಟು ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಮೀಸಲಾತಿ ಹಾಗೂ ವಿಶೇಷ ಆದ್ಯತೆ ನೀಡುವ ಮೂಲಕ ಕನ್ನಡ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಹೆಮ್ಮೆ: ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿ.ಜೆ.ಹಂಪಣ್ಣ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಒಂದು ಕಾಲದಲ್ಲಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ, ಇಂದು ಜಿಲ್ಲಾ, ತಾಲೂಕು ಮತ್ತು ಹೋಬಳಿ ಘಟಕಗಳ ಮೂಲಕ ಕನ್ನಡ ನಾಡಿನಾದ್ಯಂತ ಸಾಹಿತ್ಯಿಕ ಚಟುವಟಿಕೆ ನಿರಂತರವಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಜಗತ್ತಿನ ಯಾವುದೇ ಭಾಷೆಗೂ ಇಂತಹ ಬೃಹತ್ ಸಂಘಟಿತ ಸಾಹಿತ್ಯ ಸಂಸ್ಥೆ ಇಲ್ಲದಿರುವುದು ಕನ್ನಡಿಗರ ಸೌಭಾಗ್ಯ ಎಂದರು.88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ನಡೆಸಲು ಅವಕಾಶ ದೊರೆತಿರುವುದು ಈ ಭಾಗದ ಜನರ ಪಾಲಿಗೆ ಸಂತಸದ ಸಂಗತಿ. 2025ರಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡಿಕೆಯಾಗಿರುವುದು ನಿರಾಸೆ ಮೂಡಿಸಿದರೂ ಮುಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ ಅದನ್ನು ಅತ್ಯಂತ ವೈಭವದಿಂದ ಆಚರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಗಣಿ ನಾಡು ಎಂದೇ ಹೆಸರಾಗಿರುವ ಬಳ್ಳಾರಿ ಕೇವಲ ಬಿಸಿಲಿನ ನಾಡಲ್ಲ. ಇದು ಸಹೃದಯಿ ಕನ್ನಡಿಗರ ತವರು ಮನೆ. ಗಣಿ ಆಧಾರಿತ ಕೈಗಾರಿಕೆಗಳು ಸ್ಥಾಪನೆಯಾಗುವ ಮೂಲಕ ಅನೇಕ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿವೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳವಳಿ, ಗೋಕಾಕ್ ಚಳವಳಿ ಸೇರಿದಂತೆ ಹಲವು ಮಹತ್ವದ ಹೋರಾಟಗಳಿಗೆ ಅಖಂಡ ಬಳ್ಳಾರಿ ಜಿಲ್ಲೆ ಸಾಕ್ಷಿಯಾಗಿದೆ. ಇಲ್ಲಿನ ಜನರು ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಭಾಷಾ ಭಾವೈಕ್ಯತೆ, ಧಾರ್ಮಿಕ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಈ ನೆಲ ಹೆಸರಾಗಿದೆ ಎಂದರು.ಈ ಸಂದರ್ಭದಲ್ಲಿ ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಕೊಟ್ಟೂರು ಗುರುಬಸವೇಶ್ವರ ಸಂಸ್ಥಾನ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣ ಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ, ಆರ್ಚ್ಬಿಷಪ್ ಡಿಸೋಜಾ, ಸಾಹಿತಿ ಡಾ. ಅರವಿಂದ ಪಾಟೀಲ್, ಜಿ.ಟಿ. ಫೌಂಡೇಶನ್ ಅಧ್ಯಕ್ಷ ಜೋಳದರಾಶಿ ತಿಮ್ಮಪ್ಪ, ಕಾಂಗ್ರೆಸ್ ನಗರ ಸಮಿತಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡ ಕಲ್ಲುಕಂಬ ಪಂಪಾಪತಿ ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಅಂಗವಾಗಿ ರಾಘವ ಕಲಾಮಂದಿರದ ಮುಂಭಾಗದಲ್ಲಿ ಪುಸ್ತಕಗಳು, ಕಲಾಕೃತಿಗಳು ಸೇರಿದಂತೆ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಸ್ತುಗಳ 17 ಮಳಿಗೆ ತೆರೆಯಲಾಗಿತ್ತು. ಪುಸ್ತಕ ಪ್ರಿಯರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡಿ ಸಾಹಿತ್ಯ ಲೋಕದ ಸೊಗಡನ್ನು ಆಸ್ವಾದಿಸಿದರು.ಭುವನೇಶ್ವರಿ ಮೆರವಣಿಗೆಯ ಮೆರುಗು: ಸಮ್ಮೇಳನದ ಅಂಗವಾಗಿ ನಗರದ ದುರ್ಗಮ್ಮ ದೇವಸ್ಥಾನದಿಂದ ಕನ್ನಡ ಭುವನೇಶ್ವರಿ ಹಾಗೂ ಸಮ್ಮೇಳನಾಧ್ಯಕ್ಷ ಸಿ.ಜೆ.ಹಂಪಣ್ಣ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಜನಪದ ಕಲಾತಂಡಗಳ ಪ್ರದರ್ಶನ, ವಾದ್ಯಮೇಳ ಹಾಗೂ ಸಾಂಸ್ಕೃತಿಕ ವೈಭವ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಕನ್ನಡ ಬಾವುಟಗಳ ನಡುವೆ ಸಾಗಿದ ಭುವನೇಶ್ವರಿ ದೇವಿಯ ಮೆರವಣಿಗೆ ಕನ್ನಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತು.
ಇದಕ್ಕೂ ಮುನ್ನ ರಾಘವ ಕಲಾಮಂದಿರದಲ್ಲಿ ಪಾಲಿಕೆ ಮೇಯರ್ ಪಿ. ಗಾದೆಪ್ಪ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ನಾಡಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಕನ್ನಡದ ಭಾಷಾ ಸೊಗಡು, ಸಾಹಿತ್ಯದ ಶ್ರೀಮಂತಿಕೆ, ಜನಪದ ಕಲೆಯ ವೈಭವ ಹಾಗೂ ಕನ್ನಡಾಭಿಮಾನಿಗಳ ಉತ್ಸಾಹದೊಂದಿಗೆ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅರ್ಥಪೂರ್ಣ ಚಾಲನೆ ದೊರೆಯಿತು.