ಸಾರಾಂಶ
ಸಾಗರ: ಪಟ್ಟಣದ ಸೌಂದರ್ಯ ಹೆಚ್ಚಿಸಲು, ಸುಂದರ ಮತ್ತು ಸ್ವಚ್ಛ ಸಾಗರ ನಿರ್ಮಾಣ ಮಾಡಲು ಅಗತ್ಯವಾದ ಯೋಜನೆ ನಗರಸಭೆ ರೂಪಿಸಲಿದೆ ಎಂದು ಅಧ್ಯಕ್ಷೆ ಮೈತ್ರಿ ಪಾಟೀಲ್ ತಿಳಿಸಿದರು.
ಇಲ್ಲಿನ ನಗರಸಭೆಯಲ್ಲಿ ಮಂಗಳವಾರ ಕರೆಯಲಾಗಿದ್ದ ಬಜೆಟ್ ಪೂರ್ವ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಜೆಟ್‌ನಲ್ಲಿ ನಗರಸಭೆ ಸದಸ್ಯರು, ಸಾರ್ವಜನಿಕರು ನೀಡಿರುವ ಸಲಹೆಯನ್ನು ಪರಿಗಣಿಸಲಾಗುತ್ತದೆ. ಪ್ರಮುಖವಾಗಿ ಕರ ವಸೂಲಿ, ನೀರಿನ ತೆರಿಗೆ ವಸೂಲಿ, ಉದ್ಯಾನವನ ನಿರ್ವಹಣೆ, ಫ್ಲೆಕ್ಸ್ ಅಳವಡಿಕೆ ಮಾರ್ಗಸೂಚಿ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ಬಜೆಟ್ ತಯಾರಿಸಲಾಗುತ್ತದೆ. ನಗರಸಭೆ ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.ಸಭೆಯಲ್ಲಿ ಸದಸ್ಯೆ ಭಾವನಾ ಸಂತೋಷ್ ಉದ್ಯಾನವನಗಳ ಅಭಿವೃದ್ಧಿ ಕುರಿತು ಸಲಹೆ ನೀಡದರೆ, ಪ್ರೇಮಾ ಕಿರಣ್ ಸಿಂಗ್ ಜನರಿಗೆ ಮನೆ ಮತ್ತು ನೀರಿನ ತೆರಿಗೆ ಪಾವತಿ ಬಗ್ಗೆ ಜಾಗೃತಿ ಮೂಡಿಸಲು ಸಲಹೆ ನೀಡಿದರು. ಸದಸ್ಯ ಶ್ರೀರಾಮ್ ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ಬೃಹತ್ ಜಾಹಿರಾತು ಫಲಕ ಅಳವಡಿಸಿ ಮತ್ತು ಶುದ್ಧ ಕುಡಿಯುವ ನೀರಿನ ಕೇಂದ್ರ ಪ್ರಾರಂಭಿಸಲು ಸಲಹೆ ನೀಡಿದರು. ಸದಸ್ಯ ಬಿ.ಎಚ್.ಲಿಂಗರಾಜ್ ಎಲ್ಲ ವಾರ್ಡ್‌ಗಳಲ್ಲಿ ನಾಮಫಲಕ ಅಳವಡಿಸಲು ಸಲಹೆ ನೀಡಿದರು.
ಉಪಾಧ್ಯಕ್ಷೆ ಸವಿತಾ ವಾಸು, ಪೌರಾಯುಕ್ತ ಎಚ್.ಕೆ.ನಾಗಪ್ಪ, ವ್ಯವಸ್ಥಾಪಕ ಬಾಲಚಂದ್ರ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.