ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ

| Published : Jan 25 2024, 02:04 AM IST

ಸಾರಾಂಶ

ಜನಸಂಖ್ಯೆಯು ಹೆಚ್ಚಾದಂತೆ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗುವಂತೆ ಮಾಡಲು ವೇಮಗಲ್ ನರಸಾಪುರವನ್ನು ಅವಳಿ ಪುರಸಭೆಯಾಗಿ ಮಾಡಿ ವೇಮಗಲ್ ತಾಲೂಕು ಕೇಂದ್ರವನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನುದಾನಕ್ಕೆ ಏನೂ ಕೊರತೆಯಿಲ್ಲ. ಎಷ್ಟೇ ಅನುದಾನ ಬೇಕಾದರೂ ತಂದು ಅಭಿವೃದ್ದಿ ಮಾಡಲು ಬದ್ಧರಾಗಿದ್ದೇವೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.

ತಾಲೂಕಿನ ವೇಮಗಲ್-ಕುರಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಿಎಂ ನಗರೋತ್ಥಾನ-೪ರ ಅಡಿಯಲ್ಲಿ ವಿವಿಧ ಕಾಮಗಾರಿಗಳು ಸೇರಿದಂತೆ ಇಂದಿರಾ ಕ್ಯಾಂಟೀನ್ ಗುದ್ದಲಿ ಪೂಜೆ, ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಲ್ಲಿ ೧೩೬ ಮಕ್ಕಳಿಗೆ ಸಹಾಯ ಧನ ಹಾಗೂ ಪೌರ ಕಾರ್ಮಿಕರಿಗೆ ಮತ್ತು ಜಲಗಾರರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.

ಕೈಗಾರಿಕಾ ಪ್ರದೇಶಕ್ಕೆ ಆದ್ಯತೆ

ನರಸಾಪುರ ಮತ್ತು ವೇಮಗಲ್ ಈಗಾಗಲೇ ಕೈಗಾರಿಕಾ ಪ್ರದೇಶವಾಗಿದ್ದು ಇಲ್ಲಿ ಹೆಚ್ಚಿನ ಜನಸಂಖ್ಯೆಯಿದ್ದು ಅಭಿವೃದ್ಧಿಗೆ ಅದ್ಯತೆ ನೀಡಲಾಗುತ್ತದೆ, ಕ್ಷೇತ್ರದ ಜನರಿಗೆ ಬೆಳಕಾಗುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕೆಲಸ ಕೊಡುವ ನಮ್ಮ ಉದ್ದೇಶವಾಗಿದೆ. ಜನಸಂಖ್ಯೆಯು ಹೆಚ್ಚಾದಂತೆ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗುವಂತೆ ಮಾಡಲು ವೇಮಗಲ್ ನರಸಾಪುರವನ್ನು ಅವಳಿ ಪುರಸಭೆಯಾಗಿ ಮಾಡಿ ವೇಮಗಲ್ ತಾಲೂಕು ಕೇಂದ್ರವನ್ನಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

₹20 ಕೋಟಿ ಅನುದಾನ ಬಿಡುಗಡೆ

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಗ್ರಾಪಂಗಳಿಗೆ ಕೇವಲ ನರೇಗಾದಲ್ಲಿ ಮಾತ್ರ ಅನುದಾನ ಬರುತ್ತದೆ. ಆದರೆ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆಯಾದರೆ ವಿವಿಧ ಮೂಲಗಳಿಂದ ಸರಸ್ಕಾರಗಳಿಂದ ಅನುದಾನ ಪಡೆಯಬಹುದು, ಈಗಾಗಲೇ ವೇಮಗಲ್ ಕುರಗಲ್ ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಸರಕಾರ ೨೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಕಂದಾಯ ಸಚಿವ ಕೃಷ್ಣಬೈರೇಗೌಡ ಮುತುವರ್ಜಿಯಿಂದ ಈಗಾಗಲೇ ಸರ್ಕಾರದೊಂದಿಗೆ ಮಾತನಾಡಿ ವೇಮಗಲ್ ತಾಲೂಕು ಕೇಂದ್ರ ಮಾಡಿ ಅಭಿವೃದ್ಧಿಗೆ ಪೂರಕವಾದ ಯೋಜನೆ ತಯಾರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ, ಎಂದರು.ಪಪಂಗೆ ಚುನಾವಣೆ ನಡೆಸಿ

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ವೇಮಗಲ್ ಪಟ್ಟಣ ಪಂಚಾಯತಿಯಾಗಿ ಎರಡು ವರ್ಷವಾಗಿದ್ದು ಕೆಲವು ಕಾನೂನು ತೊಡಕುಗಳನ್ನು ಸರಿಪಡಿಸಿ ಕೂಡಲೇ ಚುನಾವಣೆ ನಡೆಸಿ ಜನರ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ವೇಮಗಲ್ ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಹರ್ಷವರ್ಧನ್, ತಾಪಂ ಮಾಜಿ ಅಧ್ಯಕ್ಷರಾದ ಉದಯಶಂಕರ್, ಮುನಿಯಪ್ಪ, ಮುಖಂಡರಾದ ನಾಗನಾಳ ಸೋಮಣ್ಣ, ಗದ್ದೆಕಣ್ಣೂರು ದಯಾನಂದ್, ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ಚಂಜಿಮಲೆ ರಮೇಶ್, ವೆಂಕಟೇಶ್, ಸಿಎಂಎಂ ಮಂಜು, ಇದ್ದರು.