ಸೋಲೂರು ಹೋಬಳಿ ಅಭಿವೃದ್ಧಿಗೆ ಆದ್ಯತೆ: ಶಾಸಕ ಎನ್. ಶ್ರೀನಿವಾಸ್

| Published : Aug 23 2024, 01:12 AM IST

ಸಾರಾಂಶ

ಮಾಗಡಿ ತಾಲೂಕಿನ ತಿಮ್ಮಸಂದ್ರ ಗ್ರಾಮಕ್ಕೂ ರಸ್ತೆ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ. ಆ ಭಾಗದ ರಸ್ತೆ ಅಭಿವೃದ್ಧಿಗೂ ಚಿಂತನೆ ನಡೆಸುತ್ತಿದ್ದೇವೆ. ಜೊತೆಗೆ ಅರಸನಕುಂಟೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಅತಿ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುತ್ತೇವೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಸೋಲೂರು ಹೋಬಳಿಯನ್ನು ಈ ಹಿಂದಿನ ಶಾಸಕರು ಅಭಿವೃದ್ಧಿಪಡಿಸುವಲ್ಲಿ ವಿಫಲರಾಗಿದ್ದು, ಅವರು ಅನುಸರಿಸುತ್ತಿದ್ದ ಮಲತಾಯಿ ಧೋರಣೆಯನ್ನು ನಾನು ವಿರೋಧಿಸಿ ಸೋಲೂರು ಹೋಬಳಿಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರಸನಕುಂಟೆ ಗ್ರಾಮದ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದೇವಸ್ಥಾನದ ಉದ್ಘಾಟನೆಗೆಂದು ಅರಸನಕುಂಟೆ ಗ್ರಾಮಕ್ಕೆ ಬಂದಂತಹ ಸಮಯದಲ್ಲಿ ರಸ್ತೆಯ ಸ್ಥಿತಿಯನ್ನು ನೋಡಿ ರಸ್ತೆ ನಿರ್ಮಿಸಲು ಭರವಸೆ ನೀಡಿದ್ದೆವು ಹೀಗಾಗಿ ಒಂದು ತಿಂಗಳ ಒಳಗಾಗಿಯೇ ಅರಸನಕುಂಟೆ ರಸ್ತೆಗೆ ಶಂಕು ಸ್ಥಾಪನೆ ನೆರವೇರಿಸುತ್ತಿದ್ದೇವೆ, ಜೊತೆಗೆ ಈ ರಸ್ತೆಗೆ ಚರಂಡಿ ಅಗತ್ಯವಾಗಿ ಬೇಕಿದ್ದು ನರೇಗಾ ಮೂಲಕ ಚರಂಡಿ ನಿರ್ಮಿಸಲು ಸೂಚಿಸಿದ್ದೇನೆ ಎಂದರು.

ಶುದ್ಧ ನೀರಿನ ಘಟಕಕ್ಕೆ ಮನವಿ:

ಮಾಗಡಿ ತಾಲೂಕಿನ ತಿಮ್ಮಸಂದ್ರ ಗ್ರಾಮಕ್ಕೂ ರಸ್ತೆ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ. ಆ ಭಾಗದ ರಸ್ತೆ ಅಭಿವೃದ್ಧಿಗೂ ಚಿಂತನೆ ನಡೆಸುತ್ತಿದ್ದೇವೆ. ಜೊತೆಗೆ ಅರಸನಕುಂಟೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಅತಿ ಶೀಘ್ರ ಶುದ್ಧ ಕುಡಿಯುವ ನೀರಿನ ಘಟಕ ತೆರೆಯುತ್ತೇವೆ ಎಂದರು.

ಗ್ರಾಮಸ್ಥರು ಕಾಮಗಾರಿ ಗುಣಮಟ್ಟ ಪರಿಶೀಲಿಸಿ:

ಅರಸನಕುಂಟೆ ಗ್ರಾಮದಲ್ಲಿ ಐವತ್ತು ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸಲಾಯಿತು. ಜೊತೆಗೆ ಗುಣಮಟ್ಟದ ಕಾಮಗಾರಿ ಮಾಡುವಂತೆ ಸಾರ್ವಜನಿಕರು ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳನ್ನು ಗಮನಿಸಿಕೊಂಡು ಒಳ್ಳೆಯ ಕೆಲಸ ಮಾಡಿಸಿಕೊಳ್ಳಬೇಕು, ಗ್ರಾಮಸ್ಥರು ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಕಳಪೆ ಗುಣಮಟ್ಟದಿಂದ ನಿರ್ಮಿಸುತ್ತಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ಸಲಹೆ ನೀಡಿದರು.

ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದ ಪಕ್ಕ ಚರಂಡಿ ಇಲ್ಲದೆ ಗುಂಡಿ ಬಿದ್ದಿದ್ದು, ಈ ಬಗ್ಗೆ ಗ್ರಾಮದ ಯುವಮುಖಂಡ ಗುರುಪ್ರಸಾದ್ ಪಿಡಿಒ ಗಮನಕ್ಕೆ ತಂದರೂ ಬಗೆಹರಿಸಲಿಲ್ಲ ಎಂದು ಶಾಸಕರ ಗಮನಕ್ಕೆ ತಂದಾಗ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮೊದಲು ಬಗೆಹರಿಸಿ, ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಸಿಆರ್ ಗೌಡ, ತಾಪಂ ಮಾಜಿ ಅಧ್ಯಕ್ಷ ಎಂ ನಾಗರಾಜ್. ಸೋಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರುದ್ರಶರ್ಮ, ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ. ಗಂಗರಂಗಯ್ಯ, ರಮೇಶ್. ಗ್ರಾಪಂ ಸದಸ್ಯರಾದ ಶಶಿಕುಮಾರ್, ಪುಟ್ಟರಾಜು. ಮಾಜಿ ಸದಸ್ಯ ರಾಜು, ಗ್ರಾಮಸ್ಥರಾದ ಅನಂತರಾಮು, ತಿಮ್ಮರಾಜು, ಜಯರಾಮು, ಬೈಲಾಂಜನೇಯ, ದಿವಾಕರ್, ದರ್ಶನ್, ಮಂಜುನಾಥ್, ಗಂಗರಾಜು, ನಂದನ್, ಶ್ರೀಕಂಠಯ್ಯ, ಶಿವಕುಮಾರ್, ಮತ್ತಿತರರು ಉಪಸ್ಥಿತರಿದ್ದರು.