ವಿಶ್ವಕರ್ಮ ಸಮಾಜವು ಪಾರಂಪರಿಕ ಕಲೆ, ಕೌಶಲ್ಯ ಹಾಗೂ ವೃತ್ತಿಪರ ಜ್ಞಾನದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಸಮುದಾಯದ ಪ್ರತಿಭಾವಂತ ಯುವಜನರು ಈ ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ವೃತ್ತಿ ಕೌಶಲ್ಯಗಳನ್ನು ರೂಪಿಸಿಕೊಳ್ಳದಿರುವುದು ಸಮುದಾಯದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಆಧುನಿಕ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ವಿಶ್ವಕರ್ಮ ಸಮಾಜದ ಸಾಂಪ್ರದಾಯಿಕ ಕಲೆ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಸಬಲಗೊಳಿಸುವ ಅಗತ್ಯವಿದೆ ಎಂದು ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಶ್ರೀವಿಶ್ವಕರ್ಮ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಪ್ರಗತಿಗೆ ಶಿಕ್ಷಣದ ಜತೆಗೆ ಆರ್ಥಿಕ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಸಣ್ಣ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಿ ಅಗತ್ಯ ನೆರವು ಕಲ್ಪಿಸುವ ಕಾರ್ಯಕ್ಕೆ ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇಂತಹ ಸಮುದಾಯಗಳ ಆರ್ಥಿಕ ಪ್ರಗತಿಗಾಗಿ ವಿವಿಧ ನಿಗಮಗಳನ್ನು ಸ್ಥಾಪಿಸಿ ನೆರವು ನೀಡುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸುಮಾರು ₹100 ಕೋಟಿ ಸಾಲ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಈ ಹಣವನ್ನು ಸಮುದಾಯ ಭವನಗಳ ನಿರ್ಮಾಣಕ್ಕೆ ಬಳಸಲು ಅವಕಾಶ ಇರಲಿಲ್ಲ. ಇದೀಗ ಕಲ್ಯಾಣ ನಿಧಿ ಯೋಜನೆಯಡಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿಗೆ ಈಗಾಗಲೇ ₹8 ಲಕ್ಷ ಮಂಜೂರು ಮಾಡಲಾಗಿದ್ದು, ಕಾಮಗಾರಿ ಆರಂಭವಾಗಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ಒದಗಿಸಿ ಭವನದ ನಿರ್ಮಾಣ ಪೂರ್ಣಗೊಳಿಸಲು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಶ್ವಕರ್ಮ ಸಮಾಜವು ಪಾರಂಪರಿಕ ಕಲೆ, ಕೌಶಲ್ಯ ಹಾಗೂ ವೃತ್ತಿಪರ ಜ್ಞಾನದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಇಂದಿನ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಸಮುದಾಯದ ಪ್ರತಿಭಾವಂತ ಯುವಜನರು ಈ ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಕಾಲಕ್ಕೆ ತಕ್ಕಂತೆ ವೃತ್ತಿ ಕೌಶಲ್ಯಗಳನ್ನು ರೂಪಿಸಿಕೊಳ್ಳದಿರುವುದು ಸಮುದಾಯದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು.

ಅರೇ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ವಿಶ್ವಕರ್ಮ ಶ್ರೀಜಗದ್ಗುರು ಪೀಠದ ಅನಂತ ಶ್ರೀವಿಭೂಷಿತ ಶಿವಜ್ಞಾನ ತೀರ್ಥ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡುವ ಮೂಲಕ ಅವರ ಭವಿಷ್ಯ ರೂಪಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಇದರಿಂದ ಹಿಂದುಳಿದ ಸಮುದಾಯಗಳ ಯುವಜನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಹಲವು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಸಚಿವ ಶಿವಲಿಂಗೇಗೌಡ ಅವರು ಉತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಂತಹ ಜನಪ್ರತಿನಿಧಿಯನ್ನು ಪಡೆದಿರುವ ಅರಸೀಕೆರೆ ಕ್ಷೇತ್ರದ ಜನರು ಪುಣ್ಯವಂತರು ಎಂದು ಶ್ಲಾಘಿಸಿದರು.

ತಹಸೀಲ್ದಾರ್ ಸಂತೋಷ್ ಕುಮಾರ್, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ, ಸಂಘದ ಅಧ್ಯಕ್ಷ ಬಿ.ಕೆ.ಯೋಗೇಶಾಚಾರ್, ಜಿಲ್ಲಾಧ್ಯಕ್ಷ ಹರೀಶ್, ಸುರೇಂದ್ರಾಚಾರ್, ಮಂಗಳಮ್ಮ ಸೇರಿ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.