ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಶಿಕ್ಷಣದಲ್ಲಿ ಸಮಾನತೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದರು.ಗುರುವಾರ ನಿಸರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲಕಾಲುಕೊಪ್ಪ ಗ್ರಾಮದಲ್ಲಿ ವಿವೇಕ ಯೋಜನೆ ಅಡಿ ನಿರ್ಮಾಣವಾದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿವೇಕ ಯೋಜನೆ ಅಡಿಯಲ್ಲಿ ಸುಮಾರು ೮೨೦೦ ಶಾಲಾ ಕಟ್ಟಣಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಶಿಕ್ಷಕರ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದಾರೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ದಿಂದ ದೂರ ಉಳಿದು ಸರ್ಕಾರಿ ಶಾಲೆಗಳ ಉತ್ತೇಜನಕ್ಕೆ ತಮ್ಮ ಮಕ್ಕಳನ್ನು ಪ್ರೇವೇಪಿಸಿ ಶಾಲೆಗೆ ಸೇರಿಸುವ ಮೂಲಕ ಶಿಕ್ಷಣದ ಉನ್ನತಿಗೆ ಸಹಕರಿಸುವಂತೆ ತಿಳಿಸಿದರು.ಮುಂದಿನ ದಿನಗಳಲ್ಲಿ ಒಂದರಿಂದ ೧೨ನೇ ತರಗತಿವರೆಗೆ ಒಂದೇ ಕಡೆ ಶಿಕ್ಷಣ ಬರುವ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮದಾಗಿದ್ದು, ಶಾಲೆಗಳಲ್ಲಿ ಕನ್ನಡ ಭಾಷೆಯ ಕಲಿಕೆ ಕಡ್ಡಾಯವಾಗಿ ಆಗಬೇಕಿದೆ. ಶಾಲೆಗಳ ಮೂಲ ಸೌಕರ್ಯದ ಬಗ್ಗೆ ಸಾಕಷ್ಟು ಅಹವಾಲುಗಳು ಬಂದಿದ್ದು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದ ಅವರು ಈಗಾಗಲೇ ತಾಲೂಕಿಗೆ ಆಗಬೇಕಾದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಗಮನ ನೀಡಲಾಗಿದೆ. ವರದಾ ನದಿಗೆ ೫ ಬ್ಯಾರೇಜ್ ನಿರ್ಮಾಣಕ್ಕೆ ಇಲಾಖಾ ಮಟ್ಟದಲ್ಲಿ ಅನುಮೋದನೆ ದೊರೆತಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ನಿಸರಾಣಿ ಗ್ರಾಮದಿಂದ ಮಾಸೂರು ಗ್ರಾಮದ ಮಾರ್ಗವಾಗಿ ಸಾಗರ ಪಟ್ಟಣಕ್ಕೆ ತೆರಳುವ ಸಂಪರ್ಕ ಸೇತುವೆಯಾಗಿ ಸಾರ್ವಜನಿಕರಿಗೆ ಅನುಕೂಲವಿರುವ ಸರ್ಕಾರಿ ಬಸ್ ಸೇವೆಯನ್ನು ಉದ್ಘಾಟಿಸಲಾಯಿತು. ಉಳವಿ ದೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕೊಠಡಿ ನಿರ್ಮಾಣದ ಉದ್ಘಾಟನೆ ಹಾಗೂ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕುಂದು ಕೊರತೆಗಳ ಬಗ್ಗೆ ಸಭೆ ನಡೆಸಿ ಅಹವಾಲು ಸ್ವೀಕರಿಸಿದರು.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜ, ಡಿಡಿಪಿಐ ಪರಮೇಶ್ವರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಜಿ.ಪಂ. ಮಾಜಿ ಸದಸ್ಯ ತಬಲಿ ಬಂಗಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಓಂಕಾರಪ್ಪ, ಸುಮಂಗಲ, ಶಿವಕುಮಾರ್, ರಶ್ಮಿ , ಮುಖ್ಯ ಶಿಕ್ಷಕ ದೇವರಾಜ್, ಅಣ್ಣಪ್ಪ ಮೊದಲಾದವರು ಹಾಜರಿದ್ದರು.