ಕೃಷಿ ಕ್ಷೇತ್ರದ ಸಮಗ್ರ ಅಭ್ಯುದಯಕ್ಕೆ ಆದ್ಯತೆ: ಶಾಸಕ

| Published : Mar 04 2024, 01:15 AM IST

ಸಾರಾಂಶ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕೃಷಿ ಕ್ಷೇತ್ರದ ಸಮಗ್ರ ಅಭ್ಯುದಯ ಎಲ್ಲರ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಕಡಿಮೆ ಅನುದಾನ ನೀಡಲಾಗಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಕೃಷಿ ಕ್ಷೇತ್ರದ ಸಮಗ್ರ ಅಭ್ಯುದಯ ಎಲ್ಲರ ಆದ್ಯತೆಯಾಗಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ 2023-24ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ, ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮ, ಆಹಾರ ಸಂಸ್ಕರಣೆ ಘಟಕ ಸ್ಥಾಪನೆ ಮತ್ತು ಉನ್ನತೀಕರಣ ಅರಿವು, ಕೃಷಿ ಭಾಗ್ಯ ಯೋಜನೆಯ ತರಬೇತಿ ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರಗತಿಯಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಮಹತ್ವದ್ದಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಪಾಲು ಹೆಚ್ಚಾಗಿದೆ. ರೈತರು ತಮ್ಮ ಪಾರಂಪರಿಕೆ ಪದ್ಧತಿಗಳ ಜೊತೆಗೆ ಇಸ್ರೇಲ್ ಮಾದರಿ ಮುಂತಾದ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಗತಿ ಸಾಧಿಸುತ್ತಿದ್ದಾರೆ. ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವ ವಿಧಾನ, ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಕೃಷಿ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ನೀಡುವುದು ಅಗತ್ಯ ಎಂದು ವಿವರಿಸಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಜೆ.ವೆಂಕಟೇಗೌಡ ಮಾತನಾಡಿ, ಸಿರಿಧಾನ್ಯಗಳು ಗಣನೀಯ ಪ್ರಮಾಣದ ಖನಿಜ, ಲವಣಗಳು, ಜೀವಸತ್ವ ಹೊಂದಿವೆ. ಉತ್ಕೃಷ್ಟ ರೋಗ ನಿರೋಧಕ ಹೊಂದಿವೆ. ಬರಗಾಲದಲ್ಲಿಯೂ ಬೆಳೆಯಬಹುದಾಗಿದೆ. ಈ ಗುಂಪಿಗೆ ರಾಗಿ, ಬಿಳಿ ಜೋಳ, ಸಜ್ಜೆ, ಸಾಮೆ, ಬರಗು ನವಣೆ, ಹಾರಕ ಮತ್ತು ಊದಲು ಸೇರಿವೆ ಎಂದು ಹೇಳಿದರು.

ಸಿರಿಧಾನ್ಯಗಳು ಒಣ ಭೂಮಿಯ ಮಹತ್ವದ ಬೆಳೆಯಾಗಿದ್ದು, ಕಡಿಮೆ ಮಳೆ ಪ್ರದೇಶಗಳಲ್ಲಿ ಹೆಚ್ಚಿನ ಇಳುವರಿ ನೀಡಲಿವೆ. ಸುಧಾರಿತ ಬೇಸಾಯ ಕ್ರಮಗಳ ಅವಶ್ಯಕತೆ ಇಲ್ಲದೆ, ಕಡಿಮೆ ರಸಗೊಬ್ಬರ, ಕೀಟನಾಶಕ ಶೂನ್ಯ ಬಳಕೆಯಿಂದ ಬೆಳೆಯಬಹುದಾದ ಬೆಳೆಗಳಾಗಿವೆ. ಬರ ನಿರೋಧಕ ಗುಣಗಳನ್ನು ಹೊಂದಿವೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ-ಕೊಡಲಾಗುತ್ತಿದೆ. ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಬಿತ್ತನೆ ಬೀಜಗಳನ್ನು ಇತರೆ ರೈತರಿಂದ ಪಡೆಯುವ ಬಗ್ಗೆ, ತಾಂತ್ರಿಕ ಸಲಹೆಗಳನ್ನು ನೀಡಲಾಗುತ್ತಿದೆ ಎಂದರು.

ಪಿಎಂಎಸ್‌ಜಿವೈ ಯೋಜನೆಯ ಸಂಪನ್ಮೂಲ ವ್ಯಕ್ತಿ ಅಭಿಷೇಕ್ ಮಾತನಾಡಿ, ಆತ್ಮನಿರ್ಭರ ಭಾರತದಲ್ಲಿ ಕೃಷಿ ಕ್ಷೇತ್ರವೂ ಮಹತ್ವದ ಪಾತ್ರ ವಹಿಸಲಿದ್ದು, ಕೃಷಿಯನ್ನು ಉದ್ದಿಮೆಯಂತೆ ಪರಿಗಣಿಸಿ ಲಾಭದಾಯಕವಾಗಿಸಬಹುದು ಎಂದರು.

ಸಹಾಯಧನ ನೀಡಲಾಗಿರುವ ವಿವಿಧ ಕೃಷಿ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ತೋಟಗಾರಿಕೆ, ರೇಷ್ಮೆ, ಸಮಗ್ರ ಕೃಷಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವಲ್ಲಿ ಸಾಧನೆ ಮಾಡಿರುವ ರೈತರಾದ ಹೊನ್ನಾವರ ರುದ್ರೇಶ್, ಕಾಡಕುಂಟೆ ನರಸಿಂಹಮೂರ್ತಿ, ಎಸ್. ಎಂ.ಗೊಲ್ಲಹಳ್ಳಿ ಮಲ್ಲೇಶ್, ಚಿಕ್ಕೇಗೌಡ, ಚಂದ್ರೇಗೌಡ, ನಂಜೇಗೌಡ, ಶ್ರವಣೂರು ರಮೇಶ್, ನಂಜುಂಡಪ್ಪ, ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉಪ ಕೃಷಿ ನಿರ್ದೇಶಕಿ ಗಾಯತ್ರಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಡಿ.ರಾಜೇಶ್ವರಿ, ತಾಂತ್ರಿಕ ವಿಭಾಗದ ರೂಪಾ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಗಿರಿಜಾಂಬ,ಪಶು ಇಲಾಖೆಯ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಇತರರಿದ್ದರು.3ಕೆಡಿಬಿಪಿ4-

ದೊಡ್ಡಬಳ್ಳಾಪುರ ಕೃಷಿ ಇಲಾಖೆ ಆವರಣದಲ್ಲಿ ನಡೆದ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ, ಸಿರಿಧಾನ್ಯಗಳ ಅರಿವು, ಆಹಾರ ಸಂಸ್ಕರಣೆ ಘಟಕ ಸ್ಥಾಪನೆ, ಕೃಷಿ ಭಾಗ್ಯ ಯೋಜನೆಯ ತರಬೇತಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.