ಸಾರಾಂಶ
ಕನ್ನಡ ಭಾಷೆ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ಭಾಗಿಯಾಗಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿ ನಗರಕ್ಕಾಗಮಿಸಿದ ಹಿನ್ನೆಲೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಸೇರಿ ಹಲವು ಪದಾಧಿಕಾರಿಗಳು ತೆರೆದ ಜೀಪ್‌ನಲ್ಲಿ ಹಾಗೂ ಬೈಕ್ ರ‍್ಯಾಲಿ ಮುಖಾಂತರ ಸ್ವಾಗತ ನಡೆಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹಾಗೂ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಸೇರಿ ಹಲವು ಪದಾಧಿಕಾರಿಗಳು ಕನ್ನಡ ಭಾಷೆ ಉಳಿವಿಗಾಗಿ ನಡೆಸಿದ ಹೋರಾಟದಲ್ಲಿ ಭಾಗಿಯಾಗಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿ ನಗರಕ್ಕಾಗಮಿಸಿದ ಹಿನ್ನೆಲೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.ಮೆರವಣಿಗೆಯು ನಗರದ ರೈಲ್ವೆ ನಿಲ್ದಾಣದಿಂದ ತೆರೆದ ಜೀಪ್‌ನಲ್ಲಿ ಹಾಗೂ ಬೈಕ್ ರ‍್ಯಾಲಿ ಮುಖಾಂತರ ರೈಲ್ವೆ ನಿಲ್ದಾಣ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ, ನೇತಾಜಿ ಸುಭಾಷ್ ಚಂದ್ರ ಬೋಸ್ ವೃತ್ತ, ಡಿಗ್ರಿ ಕಾಲೇಜ್ ಮಾರ್ಗವಾಗಿ ಜಿಲ್ಲಾ ಕರವೇ ಕಾರ್ಯಾಲಯದವರೆಗೆ ನಡೆಯಿತು.
ಮೆರಣಿಗೆ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ರಾಜಧಾನಿಯಲ್ಲಿ ಕಡ್ಡಾಯ ನಾಮಫಲಕ ಬಳಕೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಗೆ ಎಚ್ಚತ್ತುಕೊಂಡ ರಾಜ್ಯ ಸರ್ಕಾರ, ಸರ್ಕಾರಿ ಮತ್ತು ಅರೆ ಸರ್ಕಾರಿ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯ ಕನ್ನಡದ ಭಾಗವಾಗಿ ಶೇ.60:40 ಅನುಪಾತದಡಿ ಅಳವಡಿಸಲು ಸುಗ್ರೀವಾಜ್ಞೆ ಹೊರಡಿಸಿದ್ದು, ಬರುವ ದಿನಗಳಲ್ಲಿ ಅಂಗಡಿ ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬರೆಸದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಕರವೇ ಮುಖಂಡರಾದ ಮಲ್ಲು ಮಾಳಿಕೇರಿ ಮಾತನಾಡಿ, ಕನ್ನಡಕ್ಕಾಗಿ ಕೇವಲ ಸೆರೆಮನೆ ವಾಸವಲ್ಲ, ಮುಂದೊಂದು ದಿನ ನಮ್ಮನ್ನ ಗಲ್ಲಿಗೇರಿಸಿದರೂ ಸಂತೋಷದಿಂದ ಪ್ರಾಣತೆತ್ತಲು ಸಿದ್ಧರಿದ್ದೇವೆ ಎಂದರು.
ಕರವೇ ಮುಖಂಡರಾದ ವಿಶ್ವರಾಧ್ಯ ದಿಮ್ಮೆ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಯಮನಯ್ಯ ಗುತ್ತೇದಾರ, ವಿಶ್ವರಾಜ ಹೊನಗೇರಾ, ಸಾಹೇಬಗೌಡನಾಯಕ, ಸಿದ್ದಪ್ಪ ಕೂಹಿಲೂರು, ಭೀಮರಾಯ್ ರಾಮಸಮುದ್ರ ,ಅರ್ಜುನ ಪವಾರ, ವೆಂಕಟೆಶರಾಠೋಡ, ವೆಂಕಟೇಶನಾಯಕ ಬೈರಿಮಡ್ಡಿ ಇತರರಿದ್ದರು.